ಬೆಂಗಳೂರು: ಈ ವರ್ಷ ಮಾರ್ಚ್ 1ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಕಾಲೇಜಿನ ಪರೀಕ್ಷೆ ಎದುರಿಸುವ ಜೊತೆಗೆ ಪರೀಕ್ಷಾರ್ಥಿಗಳ ಕಠಿಣ ತಪಾಸಣೆಗಳಿಗೂ ಒಳಗಾಗಬೇಕಾಗುತ್ತದೆ.
ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಕೊಠಡಿಯೊಳಗೆ ಸಿಸಿಟಿವಿ ಕ್ಯಾಮರಾಗಳ ಕಣ್ಗಾವಲು ಇರುತ್ತದೆ. ಇದನ್ನು ಈ ವರ್ಷ ಪರಿಚಯಿಸಲಾಗುತ್ತಿದ್ದು ರಾಜ್ಯದ ಖಾಸಗಿ ಮತ್ತು ಸರ್ಕಾರಿ ಕಾಲೇಜುಗಳ 996 ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಮತ್ತು ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ. ಅಭ್ಯರ್ಥಿಗಳು, ಪರೀಕ್ಷಾರ್ಥಿಗಳು ಮತ್ತು ಇತರ ಸಿಬ್ಬಂದಿ ಪರೀಕ್ಷಾ ಕೊಠಡಿಗೆ ಪ್ರವೇಶಿಸುವಲ್ಲಿ ಸಿಸಿಟಿವಿ ಕ್ಯಾಮರಾಗಳಿರುತ್ತವೆ.
2016ರಲ್ಲಿ ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿ ಶಿಕ್ಷಣ ಇಲಾಖೆಯ ಗೌರವಕ್ಕೆ ಚ್ಯುತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಶಿಕ್ಷಣ ಇಲಾಖೆ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ ಕಡ್ಡಾಯ ಮಾಡಿತ್ತು. ಆದರೆ ಕೇವಲ ಶೇಕಡಾ 30ರಷ್ಟು ಸರ್ಕಾರಿ ಕಾಲೇಜುಗಳಲ್ಲಿ ಆದೇಶವನ್ನು ಪಾಲಿಸಲಾಗಿತ್ತು. ಈ ವರ್ಷ ಮಾತ್ರ ಎಲ್ಲಾ ಸರ್ಕಾರಿ ಕಾಲೇಜುಗಳಲ್ಲಿ ಸಿಸಿಟಿವಿಗಳನ್ನು ಕಡ್ಡಾಯವಾಗಿ ಅಳವಡಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಪಿಯುಸಿ ಇಲಾಖೆ ನಿರ್ದೇಶಕಿ ಸಿ.ಶಿಖಾ, ಈ ವರ್ಷ ನಾವು ಪ್ರತಿ ಕಾಲೇಜುಗಳ್ಗೆ 1 ಲಕ್ಷ ರೂಪಾಯಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲು ನೀಡಿದ್ದೇವೆ. ಒಂದು ವೇಳೆ ಖರ್ಚು 5 ಲಕ್ಷಕ್ಕಿಂತ ಹೆಚ್ಚಾದರೆ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಸಿಸಿಟಿವಿ ಕ್ಯಾಮರಾಗಳ ಅಳವಡಿಕೆಗೆ ಅಧಿಕಾರ ಹೊಂದಿರುತ್ತಾರೆ ಎಂದರು.
ಪರೀಕ್ಷೆಗಳಲ್ಲಿ ಅಕ್ರಮ ತಡೆಯಲು ಪ್ರೌಢ ಶಿಕ್ಷಣ ಇಲಾಖೆ ಪಿಯುಸಿ ಶಿಕ್ಷಣ ಇಲಾಖೆಯನ್ನು ಅನುಸರಿಸಲು ಮುಂದಾಗಿದೆ.