ರಾಜ್ಯ

ಇಂದು ಉಡುಪಿ ಪರ್ಯಾಯ: ಎರಡನೇ ಬಾರಿ ಸರ್ವಜ್ಞ ಪೀಠವನ್ನೇರಿದ ಪಲಿಮಾರು ಶ್ರೀಗಳು

Sumana Upadhyaya
ಉಡುಪಿ: ಅಪಾರ ಸಂಖ್ಯೆಯಲ್ಲಿ ಸೇರಿದ ಭಕ್ತರ ಸಮೂಹ, ಸಾಂಸ್ಕೃತಿಕ ಕಲಾವೈಭವ  ಕೃಷ್ಣಂ ವಂದೇ ಜಗದ್ಗುರು ಎನ್ನುವ ಭಕ್ತರ ಉದ್ಘೋಷದ ನಡುವೆ, ಪಲಿಮಾರು ಹೃಷಿಕೇಶ ಮಠ ಸಂಸ್ಥಾನದ ಮೂವತ್ತನೇ ಯತಿ ವಿದ್ಯಾಧೀಶ ತೀರ್ಥ ಶ್ರೀಗಳು ಎರಡನೇ ಬಾರಿಗೆ ಉಡುಪಿ ಶ್ರೀಕೃಷ್ಣ ಮಠದ ಸರ್ವಜ್ಞ ಪೀಠವನ್ನೇರಿದ್ದಾರೆ.
ಇಂದು ಬೆಳಗ್ಗೆ ಹೇಮಲಂಬಿ ಸಂವತ್ಸರದ ಮಾಘ ಮಾಸ ಶುಕ್ಲ ಪಾಡ್ಯದ ದಿನದಂದು, ನಸುಕಿನ ಎರಡು ಗಂಟೆಗೆ ಆರಂಭವಾದ ಪರ್ಯಾಯ ಪೂಜಾ ವಿಧಿವಿಧಾನಗಳನ್ನು ಮುಗಿಸಿಕೊಂಡು, ಭವ್ಯ ಮೆರವಣಿಗೆಯ ಮೂಲಕ ರಥಬೀದಿಗೆ ಆಗಮಿಸಿದ ಪಲಿಮಾರು ಶ್ರೀಗಳನ್ನು ದಾಖಲೆ ಐದನೇ ಬಾರಿಗೆ ಯಶಸ್ವಿಯಾಗಿ ಪರ್ಯಾಯವನ್ನು ಮುಗಿಸಿರುವ ಪೇಜಾವರ ಹಿರಿಯ ಮತ್ತು ಕಿರಿಯ ಶ್ರೀಗಳು ಕೃಷ್ಣಮಠಕ್ಕೆ ಸ್ವಾಗತಿಸಿದರು.
ಇದಕ್ಕೂ ಮೊದಲು, ಉಡುಪಿ ಹೊರವಲಯದ ದಂಡತೀರ್ಥದಲ್ಲಿ ನಸುಕಿನ 2.10ಕ್ಕೆ ಪುಣ್ಯಸ್ನಾನ ಪೂರೈಸಿ ನಗರಕ್ಕೆ ಆಗಮಿಸಿದ ಪಲಿಮಾರು ಶ್ರೀಗಳು, ಜೋಡುಕಟ್ಟೆ ವೃತ್ತದಲ್ಲಿರುವ ಮಂಟಪದಲ್ಲಿ ಪಟ್ಟದ ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
SCROLL FOR NEXT