ರಾಜ್ಯ

ಕಡಿಮೆ ಬೆಲೆಗೆ ಹೆಚ್ಚು ತಿಂಡಿ ವಿತರಣೆಗೆ ಸಿದ್ದವಾದ ಇಂದಿರಾ ಕ್ಯಾಂಟೀನ್

Raghavendra Adiga
ಬೆಂಗಳುರು: ರಾಜ್ಯಾದ್ಯಂತ ಕಾರ್ಯಾಚರಿಸುತ್ತಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಫೆ.1, ರಿಂದ ಜಾರಿಗೆ ಬರುವಂತೆ ಬೆಳಗಿನ ಉಪಹಾರ ಪ್ರಮಾಣವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಪ್ರಸ್ತುತ ಇರುವ ಕನಿಷ್ಟ ದರದಲ್ಲಿಯೇ ಬೆಳಗಿನ ವೇಳೆ ಹೆಚ್ಚಿನ ಪ್ರಮಾಣದ ಆಹಾರವನ್ನು ಪೂರೈಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಬಿಎಂಪಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಪ್ರಸ್ತುತ ನಿಯಮದ ಅನುಸಾರ ಇಂದಿರಾ ಕ್ಯಾಂಟಿನ್ ಗ್ರಾಹಕರು ಹೆಚ್ಚು ಆಹಾರ ಬೇಕಾದಲ್ಲಿ ಎರಡು ಟೋಕನ್ ತೆಗೆದುಕೊಳ್ಳಬೇಕಾದದ್ದು ಕಡ್ಡಾಯವಾಗಿದೆ. ಆದರೆ ಮುಂದಿನ ದಿನದಲ್ಲಿ ಒಂದೇ ಟೋಕನ್ ಅಡಿಯಲ್ಲಿ ಹೆಚ್ಚು ಉತ್ತಮ, ಸಾಕಷ್ಟು ಪ್ರಮಾಣದ ಉಪಹಾರವನ್ನು ಗ್ರಾಹಕ ನಿರೀಕ್ಷಿಸಬಹುದಾಗಿದೆ. ಆದರೆ ಮದ್ಯಾಹ್ನದ ಊಟ ಹಾಗೂ ರಾತ್ರಿಯ ಭೋಜನ ಪ್ರಮಾಣದಲ್ಲಿ ಯಾವ ಬದಲಾವಣೆ ಇರುವುದಿಲ್ಲ.
ಮುಂಬರುವ ದಿನಗಳಲ್ಲಿ ರಾಜ್ಯದ ವಿವಿಧ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ 246 ಇಂದಿರಾ ಕ್ಯಾಂಟೀನ್ ಗಳನ್ನು ಸ್ಥಾಪಿಸಲಾಗುತ್ತಿದ್ದು ಅಲ್ಲಿ ಕೂಡಾ ಬೆಳಗಿನ ಉಪಹಾರ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗುತ್ತದೆ ಎನ್ನಲಾಗಿದೆ.
ಪ್ರಸ್ತುತ ಇಂದಿರಾ ಕ್ಯಾಂಟೀನ್ ನಲ್ಲಿ ಬೆಳಗಿನ ಉಪಹಾರಕ್ಕಾಗಿ ಒಂದು ಟೋಕನ್ ಗೆ 150 ಗ್ರಾಂ ತೂಕದ ಮೂರು ಇಡ್ಲಿಗಳು, ಅಥವಾ ಪುಳಿಯೋಗರೆ(300 ಗ್ರಾಂ), ಖಾರಾ ಬಾತ್ (200 ಗ್ರಾಂ), ಪೊಂಗಲ್ (225 ಗ್ರಾಂ), ಖಿಚಡಿ (200 ಗ್ರಾಂ), ಚಿತ್ರಾನ್ನ (225 ಗ್ರಾಂ), ವಾಂಗೀ ಬಾತ್ (225 ಗ್ರಾಂ) ಚೌ-ಚೌ ಬಾತ್ (175 ಗ್ರಾಂ) ಗಳನ್ನು ನೀಡಲಾಗುತ್ತದೆ. ಆದರೆ ಫೆ.1ರಿಂದ ಈ ಪ್ರಮಾಣದಲ್ಲಿ ಸುಮಾರು ಅರ್ಧದಷ್ಟು ಹೆಚ್ಚಳವಾಗಲಿದೆ.
" ಪ್ರತಿದಿನದೊಬ್ಬ ವ್ಯಕ್ತಿಯ ಉಪಹಾರ, ಮದ್ಯಾಹ್ನದ ಊಟ ಹಾಗೂ ರಾತ್ರಿಯ ಭೋಜನ ಸೇರಿ ಇಂದಿರಾ ಕ್ಯಾಂಟೀನ್  57 ರೂ. ದರ ನಿಗದಿಪಡಿಸುತ್ತದೆ. ಇದರಲ್ಲಿ ಗ್ರಾಹಕರು 25 ರೂ. ನೀಡಿದರೆ ಉಳಿದ 32 ರೂ. ಸರ್ಕಾರ ಪಾವತಿಸುತ್ತದೆ. ಇತ್ತೀಚೆಗೆ ಕ್ಯಾಂಟೀನ್ ನಲ್ಲಿ ನೀಡಲಾಗುವ ಉಪಹಾರದ ಗುಣಮಟ್ಟ ಉತ್ತಮವಾಗಿದೆ. ಫೆ.1ರಿಂದ ಬೆಳಗಿನ ಉಪಹಾರ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗುವುದು." ಬಿಬಿಎಂಪಿ ಮೂಲಗಳು ಮಾಹಿತಿ ನೀಡಿದೆ.
SCROLL FOR NEXT