ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್
ಬೆಳಗಾವಿ: ಶಿಷ್ಟಾಚಾರ ಉಲ್ಲಂಘಿಸಿ ಕಳಸಾ-ಬಂಡೂರಿ ಯೋಜನೆಯ ಕಣಕುಂಬಿ ಪ್ರದೇಶಕ್ಕೆ ಗೋವಾದ ನಿಯೋಗ ಭೇಟಿ ನೀಡಿದ್ದು. ಇದು ಸರಿಯಲ್ಲ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಅವರು ಭಾನುವಾರ ಹೇಳಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಅನುಮತಿಯಿಲ್ಲದೆಯೇ ಕಣಕುಂಬಿಗೆ ಗೋವಾ ನಿಯೋಗ ಭೇಟಿ ನೀಡಿದ್ದು, ಶಿಷ್ಟಾಚಾರ ಉಲ್ಲಂಘನೆ ಮಾಡಿದೆ. ಅನುಮತಿ ಕೇಳದೆಯೇ ಬಂದರೂ ಗೋವಾ ನಿಯೋಗ ಸ್ಥಳಕ್ಕೆ ಭೇಟಿ ನೀಡಲು ಅನುವು ಮಾಡಿಕೊಡಲಾಗಿತ್ತು. ಕಳಸಾ-ಬಂಡೂರಿ ಯೋಜನೆಯಲ್ಲಿ ಕರ್ನಾಟಕ ಯಾವುದನ್ನು ರಹಸ್ಯವಾಗಿಟ್ಟಿಲ್ಲ. ಗೋವಾ ಸ್ಪೀಕರ್ ನೇತೃತ್ವದಲ್ಲಿ ನಿಯೋಗ ಭೇಟಿಯನ್ನು ವೈಯಕ್ತಿಕವಾಗಿ ನಾನು ವಿರೋಧಿಸುತ್ತೇನೆಂದು ಹೇಳಿದ್ದಾರೆ.
ಕನ್ನಡಿಗರವಿರುದ್ಧ ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಲೇಕರ್ ಅವರು ಹೇಳಿಕೆ ನೀಡಿರುವುದರಿಂದ ಕೆಲವೆಡೆ ವಿರೋಧದ ವಾತಾವರಣ ನಿರ್ಮಾಣವಾಗಿದೆ, ಭೇಟಿ ಮುನ್ನು ಯಾವುದೇ ರಾಜ್ಯದ ಅಧಿಕಾರಿಗಳಾದರೂ ಅನುಮತಿ ಪಡೆಯಬೇಕು. ಬಳಿಕ ಅಧಿಕಾರಿಗಳಿಗೆ ಭದ್ರತೆ ಹಾಗೂ ಆತಿಥ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ನಮಗೆ ಮಾಹಿತಿ ನೀಡದೆಯೇ ಗೋವಾ ನಿಯೋಗ ಬಂದಿರುವುದನ್ನು ನೋಡಿದರೆ, ವಿಚಾರವನ್ನು ರಾಜಕೀಯ ಮಾಡುವುದಕ್ಕೆ ಯತ್ನಿಸುತ್ತಿದೆ ಎಂದೆನಿಸುತ್ತಿದೆ. ಭದ್ರತಾ ಹಿತದೃಷ್ಟಿಯಿಂದ ನಾನು ಅವರನ್ನು ತಡೆ ಹಿಡಿದಿದ್ದರೆ, ವಿಚಾರವನ್ನು ಅವರು ರಾಜಕೀಯ ಮಾಡುತ್ತಿದ್ದರು. ಪಾರದರ್ಶಕೆಯನ್ನು ಕಾಪಾಡುವ ಸಲುವಾಗಿ ಹಾಗೂ ಇಲ್ಲಸಲ್ಲದ ಆರೋಪಗಳಿಗೆ ಗುರಿಯಾಗುವುದಕ್ಕೆ ಆಸ್ಪದ ಕೊಡದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೋವಾ ನಿಯೋಗ ಭೇಟಿ ನೀಡಿ, ಪರಿಶೀಲನೆ ನಡೆಸಲು ಅನುಮತಿ ನೀಡಿದರು ಎಂದು ತಿಳಿಸಿದ್ದಾರೆ.