ರಾಜ್ಯ

ಚುನಾವಣೆಯಲ್ಲಿ ಬಲಾಬಲ ಪ್ರದರ್ಶನಕ್ಕೆ ಮಾದರಿಯಾದ ಯಾತ್ರೆಗಳು

Nagaraja AB

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬೆಂಬಲ ಪಡೆಯುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಯಾತ್ರೆಗಳು ಮುಕ್ತಾಯಗೊಂಡಿದ್ದು, ಚುನಾವಣೆಯಲ್ಲಿ ಬಲಾಬಲ ಪ್ರದರ್ಶಿಸಲು ಈ ಯಾತ್ರೆಗಳನ್ನೇ ಮಾದರಿಯನ್ನಾಗಿ ಬಳಸಿಕೊಳ್ಳಲಾಗುತ್ತಿದೆ.

ಕಳೆದ ಮೂರು ತಿಂಗಳಿನಿಂದ ಬಿಜೆಪಿ. ಕಾಂಗ್ರೆಸ್ ಹಾಗೂ ಜೆಡಿಎಸ್  ಯಾತ್ರೆ, ಪ್ರಚಾರ ಕೈಗೊಳ್ಳುವ ಮೂಲಕ ತಮ್ಮ ಪಕ್ಷದ ಬಲಾಬಲ ಪ್ರದರ್ಶಿಸಿದರು.ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ  ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿನ ಪರಿವರ್ತನಾ ಯಾತ್ರೆ 85 ದಿನ, 10 ಸಾವಿರದ 500 ಕಿಲೋ ಮೀಟರ್ ದೂರ ಕ್ರಮಿಸಿತ್ತು .

ಯಡಿಯೂರಪ್ಪ    185  ಕಡೆ ಭಾಷಣ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯಸರ್ಕಾರದ ವೈಫಲ್ಯ, ಮತ್ತಿತರ ಸ್ಥಳೀಯ ಸಮಸ್ಯೆಗಳ ಬಗ್ಗೆ ಮಾತನಾಡಿದ್ದರು.
ಆದರೆ, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪ್ರತಿಬಿಂಬಿಸಿರುವುದು ಪಕ್ಷದ ಅನೇಕರಿಗೆ ಇಷ್ಟವಿಲ್ಲ. ಪರಿವರ್ತನಾ ಯಾತ್ರೆಯ ಆರಂಭದ ಯಾತ್ರೆಗಳಲ್ಲಿ ಕೆಲ ನಾಯಕರು ಪಾಲ್ಗೊಂಡಿರಲಿಲ್ಲ ಎಂದು ಬಿಜೆಪಿಯ ಹಿರಿಯ ನಾಯಕರೇ ಹೇಳುತ್ತಾರೆ.

ಪರಿವರ್ತನಾ ಯಾತ್ರೆ ನಂತರ ಚನ್ನಪಟ್ಟಣ ಶಾಸಕ ಸಿ. ಪಿ. ಯೋಗೇಶ್ವರ್, ಇಬ್ಬರು ಜೆಡಿಎಸ್ ಶಾಸಕರು ಮತ್ತಿತರರು ಬಿಜೆಪಿ ಸೇರ್ವಡೆಯಾಗಿದ್ದಾರೆ. ಕಾಂಗ್ರೆಸ್ ಮತ್ತಿತರ ಪಕ್ಷಗಳಿಂದ ಫೆಬ್ರವರಿ ತಿಂಗಳಲ್ಲಿ ಹಲವು ಮಂದಿ ಬಿಜೆಪಿ ಸೇರಲಿದ್ದಾರೆ ಎಂದು ಅವರು ಹೇಳಿದ್ದಾರೆ.

 ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೀದರ್ ನಿಂದ ನವಕರ್ನಾಟಕ ಯಾತ್ರೆ ಕೈಗೊಳ್ಳುವ ಮೂಲಕ ಬಿಜೆಪಿ ವಿರುದ್ಧ ದಾಳಿ ನಡೆಸಿದರು.30 ದಿನಗಳ ಅವಧಿಯಲ್ಲಿ 120 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರದ ಸಾಧನೆಗಳನ್ನು ವಿವರಿಸುತ್ತಾ, ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಿರುವುದಾಗಿ ಹೇಳಿದರು.

ಮತ್ತೊಂದೆಡೆ  ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಮತ್ತಿತರ ಹಿರಿಯ ನಾಯಕರು ಕೋಲಾರದಿಂದ ಪ್ರತ್ಯೇಕ ಯಾತ್ರೆ ಕೈಗೊಂಡು ಪ್ರಚಾರ ನಡೆಸಿದ್ದರು.ಮೈಸೂರಿನಿಂದ ಕರ್ನಾಟಕ ವಿಕಾಸ  ಯಾತ್ರೆ ನಡೆಸುವ ಮೂಲಕ ಪಕ್ಷದ ಪರವಾಗಿ ಪರವಾಗಿ ಕುಮಾರಸ್ವಾಮಿ ಪ್ರಚಾರ ನಡೆಸಿದರು.

.ಪ್ರಸ್ತುತ ಈ ಎಲ್ಲಾ ಯಾತ್ರೆಗಳು ಮುಕ್ತಾಯಗೊಂಡಿದ್ದು, ಮುಂದಿನ ತಿಂಗಳಿನಿಂದ ಮತ್ತೆ ಹೊಸ ಆಲೋಚನೆಯೊಂದಿಗೆ ಅಖಾಡ ಪ್ರವೇಶಿಸಲು ರಾಜಕೀಯ ಪಕ್ಷಗಳು ಸಿದ್ಧತೆ ನಡೆಸುತ್ತಿವೆ.


SCROLL FOR NEXT