ಬೆಂಗಳೂರು: ಎರಡು ಪಾಳಿಗಳಲ್ಲಿ ತರಗತಿ ನಡೆಸಲು ಮಲ್ಲೇಶ್ವರದ ಕೇಂದ್ರೀಯ ವಿದ್ಯಾಲಯಕ್ಕೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಅನುಮತಿ ನೀಡಿದೆ. ಆದರೆ ಪೋಷಕರಿಂದ ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ಪ್ರಸ್ತುತ ತರಗತಿಗಳು ಬೆಳಿಗ್ಗೆ 8:30 ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 2:40 ಕ್ಕೆ ಮುಕ್ತಾಯಗೊಳ್ಳುತ್ತಿದೆ. ಆದರೆ ಈಗ ಬೆಳಿಗ್ಗೆ 7 ಗಂಟೆಯಿಂದ 12.25 ವರೆಗೆ ಒಂದು ಪಾಳಿ ಹಾಗೂ ಮಧ್ಯಾಹ್ನ 12:30 ರಿಂದ 6 ವರೆಗೆ ಎರಡನೇ ಪಾಳಿಯಲ್ಲಿ ತರಗತಿಗಳನ್ನು ನಡೆಸಲು ಕೇಂದ್ರಿಯ ವಿದ್ಯಾಲಯಕ್ಕೆ ಮಾನವ ಸಂಪನ್ಮೂಲ ಇಲಾಖೆ ಅನುಮತಿ ನೀಡಿತ್ತು.
ಮೊದಲನೇ ತರಗತಿಯಿಂದ 12 ನೇ ತರಗತಿ ವರೆಗೂ ಮಲ್ಲೇಶ್ವರದ ಕೇಂದೀಯ ವಿದ್ಯಾಲಯದಲ್ಲಿ 1,836 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 2017-18 ನೇ ಶೈಕ್ಷಣಿಕ ವರ್ಷದಲ್ಲಿ ಮೊದಲನೇ ತರಗತಿಯ ಮೂರು ಸೆಕ್ಷನ್ ಗಳಲ್ಲಿರುವ 120 ಸೀಟ್ ಗಳಿಗೆ 3,040 ಅರ್ಜಿಗಳು ಬಂದಿದ್ದವು. ಪ್ರತಿ ಶೈಕ್ಷಣಿಕ ವರ್ಷದಲ್ಲೂ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಈ ಕ್ರಮಕ್ಕೆ ಮುಂದಾಗಿದೆ. ಆದರೆ ಪೋಷಕರು ಎರಡು ಪಾಳಿಗಳಲ್ಲಿ ತರಗತಿಗಳನ್ನು ನಡೆಸಲು ವಿರೋಧಿಸುತ್ತಿದ್ದಾರೆ.