ಬೆಂಗಳೂರು: ರೇರಾ ಕಾಯ್ದೆ ಅನುಷ್ಠಾನದಲ್ಲಿ ಕರ್ನಾಟಕಕ್ಕೆ ಎರಡನೇ ಸ್ಥಾನ
ಬೆಂಗಳೂರು: ರಾಜ್ಯದಲ್ಲಿ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ರೇರಾ) ಪ್ರಾರಂಭವಾಗಿ ಇನ್ನೂ ವರ್ಷವೂ ಕಳೆದಿಲ್ಲ. ಆದರೆ ದೇಶದಲ್ಲಿ ಈ ರೇರಾ ಕಾಯ್ದೆ ಒಂದು ಹೊಸ ಟ್ರೆಂಡ್ ಸೃಷ್ಟಿಸಿದೆ. ಅಲ್ಲದೆ ಕರ್ನಾಟಕ ಈ ಕಾಯ್ದೆ ಅನುಷ್ಠಾನದಲ್ಲಿ ಎರಡನೇ ಸ್ಥಾನದಲ್ಲಿದೆ. ಬೇರೆ ರಾಜ್ಯಗಳು ಸಹ ಕರ್ನಾಟಕದ ಕಾಯ್ದೆ ನುಷ್ಠಾನ ಕ್ರಮದ ಕುರಿತು ತಿಳಿಯಲು ಬಯಸುತ್ತಿದ್ದು ಅವುಗಳು ಬೆಂಗಳೂರಿನಲ್ಲಿರುವ ಪ್ರಧಾನ ಕಛೇರಿಯಿಂದ ಈ ಸಂಬಂಧ ಮಾಹಿತಿ ಪಡೆಯುತ್ತಿವೆ.
ಒಂದು ಮಾಹಿತಿಯ ಪ್ರಕಾರ ಕಾಯ್ದೆ ಉಲ್ಲಂಘನೆ ನಡೆಸಿದ್ದ ಬಿಲ್ಡರ್ಸ್ ಗಳಿಂದ ಇದುವರೆಗೆ 7 ಕೋಟಿ ರೂ ದಂಡ ಸಂಗ್ರಹಣೆಯಾಗಿದೆ. ಸುಮಾರು 500 ಕಟ್ಟಡ ನಿರ್ಮಾಣ ಯೋಜನೆಗಳಿಂದ ಈ ಮೊಇತ್ತದ ದಂಡ ಸಂಗ್ರಹವಾಗಿದ್ದು ಪ್ರಾಧಿಕಾರವು ಇದುವರೆಗೆ 175 ಯೋಜನೆಗಳನ್ನು ತಿರಸ್ಕರಿಸಿದೆ. ಇನ್ನೂ 936 ಯೋಜನೆಗಳ ಕುರಿತಂತೆ ತನಿಖೆ ನಡೆಯುತ್ತಿದೆ. ಕಳೆದ ವರ್ಷ ಜುಲೈ 26ಕ್ಕೆ ಪ್ರಾಧಿಕಾರ ರಚನೆಯಾದಂದಿನಿಂದ 1,942 ಯೋಜನೆಗಳು ಹೂಡಿಕೆಗೆ ಸೂಕ್ತವೆಂದು ಮಾನ್ಯವಾಗಿದೆ.
ರಿಯಲ್ ಎಸ್ಟೇಟ್ ವಲಯವನ್ನು ನಿಯಂತ್ರಿಸಲು ರೇರಾ ಕಾಯ್ದೆ ಅತ್ಯಂತ ಶಕ್ತಿಯುತವಾದ ಸೂತ್ರವನ್ನು ಹೊಂದಿದ್ದು ಈ ಹಿಂದೆ ವಸತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಪ್ರಾಧಿಕಾರದ ಮೊದಲ ಅಧ್ಯಕ್ಷ ಕಪಿಲ್ ಮೋಹನ್ ಅವರಿಗೆ ಇದರ ಯಶಸ್ಸಿನ ಬಹುಪಾಲು ಗೌರವ ಸಲ್ಲಬೇಕಿದೆ.
ಇದೇ ವಾರದ ಹಿಂದೆ ಅವರನ್ನು ಮೈಸೂರು ಆಡಳಿತಾತ್ಮಕ ತರಬೇತಿ ಇನ್ ಸ್ಟಿಟ್ಯೂಟ್ ಗೆ ವರ್ಗಾಯಿಸಲಾಗಿದೆ. ಅವರ ವರ್ಗಾವಣೆ ಹಲವು ಪ್ರಶ್ನೆಗಳನ್ನು ಹುತ್ಟು ಹಾಕಿದ್ದು ಬೃಅಹತ್ ಕಟ್ಟಡ ನಿರ್ಮಾಣ ಕಂಟ್ರಾಕ್ಟರ್ ಗಳ ಲಾಬಿಯಿಂದಾಗಿ ಅವರನ್ನು ವರ್ಗಾಯಿಸಲಾಗಿದೆ ಎನ್ನುವ ಗುಮಾನಿಯೂ ಇದೆ. ಸಧ್ಯ ಅವರ ಸ್ಥಾನಕ್ಕೆ ಟಿ ಕೆ ಅನಿಲ್ ಕುಮಾರ್. ನೇಮಕವಾಗಿದ್ದಾರೆ.
ಈ ಕುರಿತಂತೆ ಮಾತನಾಡಿದ ವಸತಿ ಸಚಿವ ಯುಟಿ ಖಾದರ್ ಇದೊಂದು ಸಾಮಾನ್ಯ ವರ್ಗಾವಣೆ ಎಂದಿದ್ದಾರೆ" "ಎಲ್ಲಾ ಐಎಎಸ್ / ಐಪಿಎಸ್ ಅಧಿಕಾರಿಗಳ ವರ್ಗಾವಣೆಯನ್ನು ಮುಖ್ಯಮಂತ್ರಿಗಳೇ ನಿರ್ಧರಿಸುತ್ತಾರೆ.ಮಂತ್ರಿಗಳು ಕೇವಲ ಈ ಬದಲಾವಣೆಗೆ ವಿನಂತಿ ಸಲ್ಲಿಸಬಹುದಾಗಿದೆ. ಆದರೆ ನಾನಿನ್ನೂ ಸಚಿವನಾಗಿ ಕೇವಲ 20 ದಿನಗಳಷ್ಟೇ ಆಗಿದ್ದು ನಾನು ರೇರಾ ದಲ್ಲಿ ಯಾವ ಬದಲಾವಣೆಗಳಿಗೆ ವಿನಂತಿಸಿರಲಿಲ್ಲ" ಎಂದಿದ್ದಾರೆ.