ಮೈಸೂರು: ಜಿಲ್ಲೆಯ ಹೆಚ್ ಡಿ ಕೋಟೆ ತಾಲ್ಲೂಕಿನ ಅಲೆಮಾರಿ ಕುಟುಂಬಕ್ಕೆ ಸೇರಿದ ಸೋದರ-ಸೋದರಿ ಇತ್ತೀಚೆಗೆ ಮಲೇಷಿಯಾದಲ್ಲಿ ನಡೆದ 19ನೇ ಅಂತಾರಾಷ್ಟ್ರೀಯ ಕರಾಟೆ ಚ್ಯಾಂಪಿಯನ್ ಶಿಪ್ ನಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿದ್ದಾರೆ.
ನಿಖಿಲ್ ಮತ್ತು ಐಶ್ವರ್ಯ ಸಹೋದರ-ಸಹೋದರಿಯರ ಸಾಧನೆ ಅದ್ವಿತೀಯವಾಗಿದ್ದರೂ ಕೂಡ ಇವರ ಪೋಷಕರಾದ ಮಂಜು ರಾವ್ ಮತ್ತು ದಿವ್ಯ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ. 2 ಲಕ್ಷ ರೂಪಾಯಿ ಹೊಂದಿಸಿ ಮಲೇಷಿಯಾಗೆ ಕಳುಹಿಸಲು ಅವರಿಗೆ ತೀವ್ರ ತೊಂದರೆಯಾಗಿದೆ.
9ನೇ ತರಗತಿಯಲ್ಲಿ ಓದುತ್ತಿರುವ ನಿಖಿಲ್ ಮತ್ತು ಪ್ರಥಮ ಪಿಯುಸಿಯಲ್ಲಿರುವ ಐಶ್ವರ್ಯಾ, ಕೌಲಾಲಂಪುರದಲ್ಲಿ ಮೇ 29ರಿಂದ ಜೂನ್ 1ರವರೆಗೆ ನಡೆದ ಸ್ಪರ್ಧೆಯಲ್ಲಿ ಇರಾನ್, ಇಂಡೊನೇಷಿಯಾ, ಮಲೇಷಿಯಾ ಮತ್ತು ಭಾರತದ ಸ್ಪರ್ಧಿಗಳನ್ನೇ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಮೈಸೂರು, ಕೊಡಗು, ಚಾಮರಾಜನಗರ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ಅಲ್ಯುಮಿನಿಯಂ ಮತ್ತು ಸ್ಟೀಲ್ ಪಾತ್ರೆಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿರುವ ಮಂಜು ಮತ್ತು ದಿವ್ಯ ಅವರಿಗೆ ಮಕ್ಕಳ ಕ್ರೀಡಾ ಸ್ಪರ್ಧೆಗಳಿಗೆ ಹೋಗಲು, ತರಬೇತಿಗೆ ಹಣ ಹೊಂದಿಸುವುದು ಕಷ್ಟವಾಗುತ್ತಿದೆ. ಕಳೆದ ಶುಕ್ರವಾರ ಅವರು ತಮ್ಮ ಮಕ್ಕಳು ಪಂದ್ಯ ಮುಗಿಸಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಸ್ವಾಗತಿಸಲು ಸಜ್ಜಾಗಿದ್ದರು.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಮಂಜು, ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದ ನನ್ನ ಮಕ್ಕಳ ಬಗ್ಗೆ ಹೆಮ್ಮೆಯೆನಿಸುತ್ತದೆ. ಮುಂದೆ ಕೂಡ ಅವರು ದೇಶದ ಕೀರ್ತಿ ಪತಾಕೆ ಹೆಚ್ಚಿಸಬೇಕು. ಅವರನ್ನು ಸ್ಪರ್ಧೆಗೆ ಕಳುಹಿಸಲು 2 ಲಕ್ಷ ರೂಪಾಯಿ ಸಾಲ ಮಾಡಿ ಕಳುಹಿಸಿದ್ದೇನೆ, ಇದೀಗ ಸಾಲ ತೀರಿಸುವುದು ಹೇಗೆ ಎಂಬ ಚಿಂತೆಯಾಗುತ್ತಿದೆ. ನಾನು ಮತ್ತು ಪತ್ನಿ ಸಾಲ ತೀರಿಸಲು ಇನ್ನಷ್ಟು ಕೆಲಸ ಮಾಡಬೇಕಾಗಿದೆ ಎಂದರು.
ಮೊದಲ ಬಾರಿಗೆ ವಿದೇಶಕ್ಕೆ ಹೋಗುವಾಗ ತುಂಬಾ ಭಯವಾಗಿತ್ತು. ನನ್ನ ಕೋಚ್ ಮತ್ತು ವ್ಯವಸ್ಥಾಪಕರು ನನಗೆ ಉತ್ತೇಜನ ನೀಡಿದರು. ನನ್ನ ದೇಶಕ್ಕೆ ಮತ್ತು ತಂದೆ ತಾಯಿಗೆ ಹೆಮ್ಮೆಯನ್ನುಂಟುಮಾಡಿದ ಸಂತೋಷ ಇಂದು ನನಗಿದೆ ಎನ್ನುತ್ತಾರೆ ಐಶ್ವರ್ಯಾ.