ಬೆಂಗಳೂರು: ಮುಜರಾಯಿ ಇಲಾಖೆಯಡಿ ಬರುವ ಕಡಿಮೆ ಆದಾಯ ಗಳಿಸುವ ದೇವಸ್ಥಾನಗಳನ್ನು ಅಭಿವೃದ್ಧಿಪಡಿಸುವ ಬದಲು ನೂತನ ದೇವಸ್ಥಾನಗಳನ್ನು ನಿರ್ಮಿಸುವುದರಲ್ಲಿ ರಾಜ್ಯದ ಶಾಸಕರು ಮತ್ತು ಸಂಸದರು ಹೆಚ್ಚು ಆಸಕ್ತಿ ಹೊಂದಿದ್ದಾರೆ.
ಇದಕ್ಕೆ ಕಾರಣ, 'ಸಿ' ದರ್ಜೆಯ ದೇವಸ್ಥಾನಗಳು ಎಂದು ಕರೆಯಲ್ಪಡುವ ಕಡಿಮೆ ಆದಾಯ ಹೊಂದಿರುವ ದೇವಸ್ಥಾನಗಳನ್ನು ಅಭಿವೃದ್ಧಿಪಡಿಸಿ ನಿರ್ವಹಿಸುವ ಬದಲು ಹೊಸ ದೇವಸ್ಥಾನಗಳ ನಿರ್ಮಾಣಕ್ಕೆ ಹಣ ಒದಗಿಸಿದರೆ ಹೆಚ್ಚು ಜನಪ್ರಿಯತೆ ಸಿಗುತ್ತದೆ ಎಂಬುದು. ಸಂಸದರು ಮತ್ತು ಶಾಸಕರು ಹೊಸ ದೇವಸ್ಥಾನಗಳನ್ನು ಕಟ್ಟಿಸುವುದಕ್ಕೆ ಹೆಚ್ಚು ಒಲವು ತೋರಿಸುವುದನ್ನು ಗಮನಿಸಿದ್ದೇನೆ ಎನ್ನುತ್ತಾರೆ ಮುಜರಾಯಿ ಇಲಾಖೆ ಸಚಿವ ರಾಜಶೇಖರ್ ಬಸವರಾಜ್ ಪಾಟೀಲ್.
ಕರ್ನಾಟಕದಲ್ಲಿ ಮುಜರಾಯಿ ಇಲಾಖೆಯಡಿ 34,559 ದೇವಾಲಯಗಳಿವೆ. ಇವುಗಳಲ್ಲಿ 175 ದೇವಸ್ಥಾನಗಳು ಎ ದರ್ಜೆಯ(ವಾರ್ಷಿಕ ಆದಾಯ ಸರಾಸರಿ 25 ಲಕ್ಷ ರೂ), 163 ಬಿ ದರ್ಜೆಯ(ವಾರ್ಷಿಕ ಆದಾಯ 5 ರಿಂದ 25 ಲಕ್ಷ ರೂಪಾಯಿಗಳ ಮಧ್ಯೆ) ಹಾಗೂ 34,221 ಸಿ ದರ್ಜೆಯ(ವಾರ್ಷಿಕ ಆದಾಯ 5 ಲಕ್ಷ ರೂಪಾಯಿಗಳಿಗಿಂತ ಕಡಿಮೆಯಿರುವ) ದೇವಾಲಯಗಳಿವೆ. ಸಿ ದರ್ಜೆಯ ದೇವಾಲಯಗಳಿಗೆ ಜೀರ್ಣೋದ್ಧಾರದ ಅವಶ್ಯಕತೆಯಿದ್ದು ಕೆಲವು ದೇವಾಲಯಗಳು ಶಿಥಿಲಾವಸ್ಥೆಯಲ್ಲಿವೆ. ಸ್ಥಳೀಯ ಸಂಸದರು ಮತ್ತು ಶಾಸಕರು ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಹಳೆ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡುವುದರ ಬದಲಿಗೆ ತಮ್ಮ ಕ್ಷೇತ್ರದಲ್ಲಿ ಹೊಸ ದೇವಾಲಯಗಳ ನಿರ್ಮಾಣಕ್ಕೆ ಹೆಚ್ಚು ಉತ್ಸುಕವಾಗಿದ್ದಾರೆ. ತಮ್ಮ ಕ್ಷೇತ್ರದ ಜನರ ಒತ್ತಡದಿಂದಾಗಿ ಹೊಸ ದೇವಸ್ಥಾನಗಳ ನಿರ್ಮಾಣಕ್ಕೆ ಹಣ ನೀಡುತ್ತಾರೆ ಎನ್ನುತ್ತಾರೆ ರಾಜಶೇಖರ ಪಾಟೀಲ್.
ಸಿ ದರ್ಜೆಯ ದೇವಸ್ಥಾನಗಳಲ್ಲಿ ಬರುವ ಅಲ್ಪ ಆದಾಯವನ್ನು ಅರ್ಚಕರ ವೇತನಕ್ಕೆ ಮತ್ತು ಅಗತ್ಯ ಪೂಜಾ ಸಾಮಗ್ರಿಗಳನ್ನು ಕೊಳ್ಳಲು ಉಪಯೋಗಿಸುತ್ತಾರೆ. ಹೀಗಾಗಿ ಸಿ ದರ್ಜೆಯ ದೇವಸ್ಥಾನಗಳಲ್ಲಿ ಅಭಿವೃದ್ಧಿಗೆ ಹಣವಿರುವುದಿಲ್ಲ. ಈ ದೇವಸ್ಥಾನಗಳು ಅಷ್ಟೊಂದು ಜನಪ್ರಿಯವಲ್ಲದ ಮತ್ತು ಜನಸಂದಣಿಯಿಂದ ದೂರವಿರುವ ದೇವಸ್ಥಾನಗಳಾಗಿರುವುದರಿಂದ ಆದಾಯ ಗಳಿಸುವುದು ದೊಡ್ಡ ಸವಾಲು. ದೇವಸ್ಥಾನವೆಂದ ಮೇಲೆ ಅದು ಉದ್ಯಮವಲ್ಲ, ಆದರೆ ಈ ದೇವಸ್ಥಾನಗಳ ಅಭಿವೃದ್ಧಿಗೆ ಹಣ ಬೇಕಾಗುತ್ತದೆಯಲ್ಲವೇ ಎಂದು ಮುಜರಾಯಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಇದೇ ತಿಂಗಳ 27ರಂದು ಮುಖ್ಯಮಂತ್ರಿಗಳು ಮುಜರಾಯಿ ಇಲಾಖೆಯ ಅಧಿಕಾರಿಗಳ ಸಭೆ ಕರೆದಿದ್ದು ಸಿ ದರ್ಜೆಯ ದೇವಸ್ಥಾನಗಳ ಅಭಿವೃದ್ಧಿ ಕುರಿತು ಚರ್ಚಿಸುತ್ತೇವೆ. ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ದೇವಾಲಯಗಳ ಜೀರ್ಣೋದ್ಧಾರಕ್ಕೆ ಹಣ ಬಿಡುಗಡೆ ಮಾಡುತ್ತಾರೆ ಎಂದು ನಿರೀಕ್ಷಿಸಿದ್ದೇವೆ ಎಂದು ಸಚಿವರು ಹೇಳಿದರು.
ಸಿ ದರ್ಜೆಯ ಕೆಲವು ದೇವಸ್ಥಾನಗಳನ್ನು ನಿರ್ಹಹಿಸಲು ಸಾಧ್ಯವಾಗದೆ ಕೆಲವು ಸಮಯಗಳವರೆಗೆ ಖಾಸಗಿ ವ್ಯಕ್ತಿಗಳಿಗೆ ನಿರ್ವಹಣೆಗೆ ನೀಡಲು ಮುಜರಾಯಿ ಇಲಾಖೆ ಚಿಂತನೆ ನಡೆಸುತ್ತಿದೆ. ಈ ಯೋಜನೆ ಆರಂಭದ ಹಂತದಲ್ಲಿದ್ದು ಸ್ವಲ್ಪ ಸಮಯಗಳವರೆಗೆ ಖಾಸಗಿ ನಿರ್ವಹಣೆಗೆ ನೀಡುವ ಉದ್ದೇಶವಿದೆ ಎಂದು ಮೂಲಗಳು ಹೇಳುತ್ತವೆ. ಆದರೆ ಇದನ್ನು ಸಚಿವರು ನಿರಾಕರಿಸಿದ್ದಾರೆ.