ರಾಜ್ಯ

ರೈತರ ಸಾಲ ಮನ್ನಾ ಆಗಲು ಕನಿಷ್ಠ 3 ತಿಂಗಳಾದರೂ ಬೇಕು: ಸರ್ಕಾರಿ ಮೂಲಗಳು

Sumana Upadhyaya

ಬೆಂಗಳೂರು: ಈ ಸಾಲಿನ ಬಜೆಟ್ ನಲ್ಲಿ ರಾಜ್ಯದ 17.32 ಲಕ್ಷ ರೈತರ 34 ಸಾವಿರ ಕೋಟಿ ರೂಪಾಯಿ ಸಾಲಮನ್ನಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪ್ರಕಟಿಸಿದ್ದರೂ ಕೂಡ ತಕ್ಷಣಕ್ಕೆ ರೈತರಿಗೆ ಇದರಿಂದ ಪರಿಹಾರ ಸಿಗುವ ಲಕ್ಷಣ ಕಾಣುತ್ತಿಲ್ಲ.

ಸಾಲಮನ್ನಾಗೆ ಫಲಾನುಭವಿ ರೈತರು ತಾವು ಸಾಲಮುಕ್ತ ಎಂದು ಪ್ರಮಾಣಪತ್ರ ಸಿಕ್ಕಿ ಮುಂದೆ ಹೊಸ ಸಾಲ ಪಡೆಯಲು ಕನಿಷ್ಠ ಇನ್ನು ಮೂರು ತಿಂಗಳು ಕಾಯಬೇಕಾಗಿದೆ. ಅಂದರೆ ಸಾಲಮನ್ನಾ ಆಗಬಹುದು ಎಂಬ ಆಸೆಯಿಂದ ತಮ್ಮ ಸಾಲವನ್ನು ಬ್ಯಾಂಕುಗಳಲ್ಲಿ ನವೀಕರಣ ಮಾಡದಿರುವ ರೈತರಿಗೆ ಈ ಖಾರಿಫ್ ಋತುವಿನಲ್ಲಿ ಹೊಸ ಸಾಲ ಬ್ಯಾಂಕುಗಳಿಂದ ದೊರಕುವುದಿಲ್ಲ.

ಏಪ್ರಿಲ್-ಮೇ ತಿಂಗಳಲ್ಲಿ ಸಾಲ ನವೀಕರಣ ಆಗಬೇಕು. ಆದರೆ ನೂತನ ಸರ್ಕಾರ ಸಾಲಮನ್ನಾ ಮಾಡಬಹುದು ಎಂಬ ಆಸೆಯಿಂದ ಬಹುಪಾಲು ರೈತರು ತಾವು ತೆಗೆದುಕೊಂಡ ಸಾಲವನ್ನು ಹಿಂತಿರುಗಿಸಿರಲಿಲ್ಲ. ಬ್ಯಾಂಕುಗಳು ಕೂಡ ಸಾಲ ನವೀಕರಣ ಮಾಡಿರಲಿಲ್ಲ. ಈಗ ಹಳೆ ಸಾಲ ಮನ್ನಾ ಆಗದೆ ರೈತರಿಗೆ ಯಾವುದೇ ಹೊಸ ಸಾಲ ಖಾರಿಫ್ ಋತುವಿನಲ್ಲಿ ಸಿಗುವುದಿಲ್ಲ ಎನ್ನುತ್ತಾರೆ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಮಾರುತಿ ಮನ್ಪಡೆ.

ಸರ್ಕಾರದಿಂದ ಬ್ಯಾಂಕುಗಳಲ್ಲಿ ರೈತರ ಸಾಲಮನ್ನಾ ಆಗಬೇಕಾದರೆ ಇನ್ನು ಕನಿಷ್ಠ ಮೂರು ತಿಂಗಳಾದರೂ ಬೇಕು. ಇನ್ನೊಂದು ತಿಂಗಳು ಕಳೆದ ನಂತರವಷ್ಟೇ ಸಾಲ ಮನ್ನಾ ಮಾಡುವ ಪ್ರಕ್ರಿಯೆಯನ್ನು ಸರ್ಕಾರ ಪ್ರಾರಂಭಿಸಲಿದೆ ಎಂದು ಸರ್ಕಾರಿ ಮೂಲಗಳು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿವೆ. ಬ್ಯಾಂಕಿನ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಪ್ರತಿ ಬ್ಯಾಂಕುಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಕಚೇರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ಮುಂದೇನು?: ಸಾಲಮನ್ನಾಗೆ ಯೋಗ್ಯವಾದ ರೈತರ ಖಾತೆಗಳು ಮತ್ತು ಅವರ ಸಾಲದ ಮೊತ್ತದ ವಿವರಗಳನ್ನು ತಯಾರಿಸುವಂತೆ ಬ್ಯಾಂಕುಗಳನ್ನು ಸರ್ಕಾರ ಕೋರಲಿದೆ. ಈ ಅಂಕಿಅಂಶಗಳನ್ನು ಬ್ಯಾಂಕುಗಳು ಸರ್ಕಾರಕ್ಕೆ ಸಲ್ಲಿಸಿದ ನಂತರ ಕಂಪ್ಯೂಟರ್ ಗೆ ಅಪ್ ಲೋಡ್ ಮಾಡಬೇಕಾಗುತ್ತದೆ. ಅಲ್ಲಿ ಅಂಕಿಅಂಶಗಳನ್ನು ಪರಿಶೀಲಿಸಿದ ನಂತರ ಹಣಕಾಸು ಇಲಾಖೆಯಲ್ಲಿ ವಿಶೇಷ ಘಟಕವನ್ನು ಸ್ಥಾಪಿಸಿ ಅದು ಅಂಕಿಅಂಶ ದಾಖಲೆಯನ್ನು ಪರೀಶೀಲಿಸುವ ಪ್ರಕ್ರಿಯೆ ಮಾಡುತ್ತದೆ. ಇದಕ್ಕೆ ಸರ್ಕಾರ ರೈತರ ಆಧಾರ್ ಸಂಖ್ಯೆಯನ್ನು ಮತ್ತು ಭೂಮಿ ವೆಬ್ ಸೈಟ್ ನಿಂದ ರೈತರ ಜಮೀನಿನ ದಾಖಲೆಗಳನ್ನು ಪರಿಶೀಲಿಸಲಿದೆ.

ಖಾತೆಗಳಲ್ಲಿ ಭಿನ್ನತೆ ಕಂಡುಬಂದರೆ ಅದು ತಿರಸ್ಕೃತಗೊಳ್ಳುತ್ತವೆ ಮತ್ತು ನಿಖರ ಖಾತೆಗಳನ್ನು ಹೊಂದಿರುವ ರೈತರ ಸಾಲ ಮನ್ನಾವಾಗುತ್ತದೆ ಎಂದು ಸಾಲಮನ್ನಾ ಪ್ರಕ್ರಿಯೆ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸರ್ಕಾರದ ಅಧಿಕಾರಿಯೊಬ್ಬರು ಹೇಳುತ್ತಾರೆ.

SCROLL FOR NEXT