ಬೆಂಗಳೂರು: ಈ ಬಾರಿ ಪ್ರವಾಸೋದ್ಯಮ ಕೇಂದ್ರಿತ ದಸರಾ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ನಡೆದ ದಸರಾ ಪೂರ್ವಭಾವಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ ಅವರು, ಮೈಸೂರು ಜಿಲ್ಲೆಯ ಪಕ್ಕದಲ್ಲೇ ಮಡಿಕೇರಿ ಇದೆ. ಅಂತೆಯೇ ಬಂಡೀಪುರ, ನಾಗರಹೊಳೆ ಸೇರಿದಂತೆ ಹಲವು ಪ್ರವಾಸಿ ತಾಣಗಳಿವೆ. ಇನ್ನು ಮೈಸೂರಿನಲ್ಲಿ ವಿಶ್ವ ವಿಖ್ಯಾತ ದಸರಾ ನಡೆಯುತ್ತದೆ. ಅದರ ಆಸುಪಾಸಿನಲ್ಲೇ ಸಾಕಷ್ಟು ಪ್ರವಾಸಿ ತಾಣಗಳಿರುವುದರಿಂದ ಪ್ರವಾಸೋದ್ಯಮ ಕೇಂದ್ರಿತ ದಸರಾ ಮಾಡಲಾಗುವುದು ಎಂದು ತಿಳಿಸಿದರು.
'ಅಕ್ಟೋಬರ್ನಲ್ಲಿ ದಸರಾ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪೂರ್ವ ಸಿದ್ದತಾ ಸಭೆ ನಡೆಸಿದ್ದೇವೆ. ಆಷಾಢ ಮಾಸ ಆರಂಭಕ್ಕೂ ಮೊದಲೇ ಪೂರ್ವಸಿದ್ದತಾ ಸಭೆ ನಡೆಸ ಬೇಕೆಂದು ಜಿಟಿ ದೇವೇಗೌಡ ಅವರು ತಿಳಿಸಿದ್ದರು. ಅದರಂತೆ ಸಭೆ ನಡೆದಿದೆ. ಮೂರೂ ಜಿಲ್ಲೆಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಧಿಕಾರಿಗಳು ದಸರಾ ಕಾರ್ಯಕ್ರಮ ನಡೆಸಬೇಕು. ಆ ಭಾಗದಲ್ಲಿ ಉತ್ತಮ ಮಳೆ ಆಗುತ್ತಿದೆ. ವಿಶ್ವದಲ್ಲೇ ದಸರಾ ಉತ್ತಮ ಕಾರ್ಯಕ್ರಮ ಆಗಬೇಕೆಂಬ ಇಚ್ಛೆ ಎಲ್ಲರಿಗೂ ಇದೆ. ಪ್ರತಿ ವರ್ಷದ ಕಾರ್ಯಕ್ರಮಗಳಿಗಿಂತ ಈ ಬಾರಿ ಹೊಸ ಕಾರ್ಯಕ್ರಮ ತರಲು ಸಿದ್ದತೆ ಮಾಡಿಕೊಳ್ಳಲು ಸೂಚಿಸಿದ್ದೇನೆ. ಅಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡಬೇಕು' ಎಂದು ಕುಮಾರಸ್ವಾಮಿ ಸಲಹೆ ನೀಡಿದರು.
ಇನ್ನು ಉತ್ಸವಕ್ಕೆ ಶಾಸಕರು ಮತ್ತು ಸಚಿವರ ನೇತೃತ್ವದಲ್ಲಿ ಸಮಿತಿ ಮಾಡಿಕೊಳ್ಳುವುದು ಉತ್ತಮ. ಪಾಸ್ ಸೇರಿದಂತೆ ಯಾವುದೇ ರೀತಿಯ ಗೊಂದಲ ಆಗದಂತೆ ಸಮಿತಿ ನೋಡಿಕೊಳ್ಳಬೇಕು. ಸರ್ಕಾರ ದಸರಾಗೆ ಎಲ್ಲಾ ರೀತಿಯ ಸಹಕಾರ ನೀಡಲಿದೆ. ದಸರಾ ಕಾರ್ಯಕ್ರಮಕ್ಕೆ ಏನು ಕೇಳಲಾಗುತ್ತದೆಯೋ ಅದನ್ನು ನೀಡಲಾಗುವುದು. ಕಳೆದ ಬಾರಿ ನಿಗದಿಯಾದ ಹಣದಲ್ಲಿ ಸ್ವಲ್ಪ ಹಣ ಇನ್ನು ಬಾಕಿ ಇದೆ. ಅದನ್ನೂ ಈ ಬಾರಿ ಬಿಡುಗಡೆ ಮಾಡಲಾಗುವದು ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದರು.
ಇನ್ನು ಇಂದು ನಡೆದ ದಸರಾ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಉನ್ನತ ಸಚಿವ ಜಿಟಿ ದೇವೇಗೌಡ, ಎನ್ ಮಹೇಶ್, ಸಿ.ಎಸ್. ಪುಟ್ಟರಂಗಶೆಟ್ಟಿ, ಸಚಿವೆ ಜಯಮಾಲ, ಶಾಸಕರಾದ ಎಚ್. ವಿಶ್ವನಾಥ್, ಶಾಸಕ ಯತೀಂದ್ರ ಸೇರಿದಂತೆ ಮೈಸೂರು ಭಾಗದ ಎಲ್ಲ ಪ್ರತಿನಿಧಿಗಳು ಭಾಗವಹಿಸಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos