ರಾಜ್ಯ

ಪೊಲೀಸರಿಗೆ ಶಿಲ್ಪಾ ಗಣೇಶ್ ದೂರು

Sumana Upadhyaya

ಬೆಂಗಳೂರು: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರಿಗೆ ಬಿಜೆಪಿ ಕಾರ್ಯಕರ್ತೆ, ನಟ ಗಣೇಶ್ ಪತ್ನಿ ಶಿಲ್ಪಾ ಗಣೇಶ್ ಅವಮಾನ ಮಾಡಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿ ಶಿಲ್ಪಾ ಗಣೇಶ್ ಪೊಲೀಸರಿಗೆ ದೂರು ನೀಡಿದ್ದಾರೆ.

ಶಿಲ್ಪಾ ಗಣೇಶ್ ಹೆಸರಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಾಡಪ್ರಭು ಕೆಂಪೇಗೌಡರಿಗೆ ಅವಮಾನವಾಗುವ ರೀತಿಯಲ್ಲಿ ಪೋಸ್ಟ್ ಮಾಡಲಾಗಿದ್ದು, ಫೋಟೋ ಸಮೇತ ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಲಾಗಿತ್ತು. ಈ ವಿಚಾರಕ್ಕೆ ಸಂಬಂಧಪಟ್ಟು ಶಿಲ್ಪಾರ ವಿರುದ್ಧ ಕಳೆದ ಎರಡು ಮೂರು ದಿನಗಳಿಂದ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.

ಯಾರೋ ಕಿಡಿಗೇಡಿಗಳು ನನಗೆ ತೊಂದರೆ ನೀಡಲು ಈ ಕೃತ್ಯ ನಡೆಸಿದ್ದಾರೆ. ನನಗೆ ಕೆಂಪೇಗೌಡರ ಬಗ್ಗೆ ಅಪಾರ ಗೌರವವಿದೆ. ಈ ವಿಚಾರವಾಗಿ ಫೇಸ್ ಬುಕ್ ನಲ್ಲಿ ಹೇಳಿಕೆ ನೀಡಿದ್ದೇನೆ. ಆದರೆ ಇದನ್ನು ಸೃಷ್ಠಿಸಿದ ಕಿಡಿಗೇಡಿಗಳನ್ನು ಪತ್ತೆ ಮಾಡಿ ಎಂದು ರಾಜರಾಜೇಶ್ವರಿ ನಗರ ಠಾಣೆಯಲ್ಲಿ ದೂರು ನೀಡಿದ್ದೇನೆ ಎಂದಿದ್ದಾರೆ ಶಿಲ್ಪಾ ಗಣೇಶ್.

ಯಾರೋ ಅಪರಿಚಿತರು ಸಾಮಾಜಿಕ ಜಾಲತಾಣದಲ್ಲಿ ನನ್ನ ಭಾವಚಿತ್ರವನ್ನು ಬಳಸಿಕೊಂಡು ನಾಡಪ್ರಭು ಕಂಪೇಗೌಡರ ವಿರುದ್ಧ ನಕಲಿ ಹೇಳಿಕೆ ಸೃಷ್ಟಿ ಮಾಡಿಕೊಂಡಿದ್ದಾರೆ. ಜುಲೈ 6ರಂದು ನಾನು ಎಂದಿನಂತೆ ನನ್ನ ವಾಟ್ಸಾಪ್ ತೆಗೆದು ನೋಡಿದಾಗ ಗಿರಿಗೌಡ ಎಂಬವರ ನಂಬರ್ ನಿಂದ ನಾನು ಬರೆಯದೆ ಮತ್ತು ಹೇಳದೆ ಇರುವಂತಹ ಹೇಳಿಕೆಯನ್ನು ಭಾವಚಿತ್ರ ಸಮೇತ ಸೃಷ್ಟಿ ಮಾಡಲಾಗಿತ್ತು. ಅದರಲ್ಲಿ ನಾಡಪ್ರಭು ಕೆಂಪೇಗೌಡರ ಬಗ್ಗೆ “ಕೆಂಪೇಗೌಡರಿಗಿಂತ ಸಾಧನೆ ಮಾಡಿದವರು ಅನೇಕರಿದ್ದಾರೆ. ಸ್ಕಿಲ್ ಯುನಿವರ್ಸಿಟಿಗೆ ಕೆಂಪೇಗೌಡರ ಹೆಸರಿಡುವ ಅವಶ್ಯಕತೆ ಇರಲಿಲ್ಲ” ಎಂದು ಬರೆದು ಅದರ ಕೆಳಗೆ ಶಿಲ್ಪಾ ಗಣೇಶ್ ಎಂದು ನನ್ನ ಹೆಸರನ್ನು ಬರೆದಿದ್ದಾರೆ.

ಇದನ್ನು ನೋಡಿದ ನನಗೆ ಆಶ್ಚರ್ಯವಾಯಿತ್ತು. ಕೂಡಲೇ ನಾನು ನನ್ನ ನಿಜವಾದ ಫೇಸ್‍ಬುಕ್ ಹಾಗೂ ಟ್ವಿಟ್ಟರ್ ಖಾತೆಯಿಂದ ನಕಲಿ ಹೇಳಿಕೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸ್ಪಷ್ಟನೆ ನೀಡಿದ್ದೇನೆ. ನಾಡಪ್ರಭು ಕೆಂಪೇಗೌಡರ ಬಗ್ಗೆ ಅಪಾರವಾದ ಗೌರವವಿದೆ. ಅವರನ್ನು ಅವಮಾನ ಮಾಡುವಂತಹ ಯಾವುದೇ ಹೇಳಿಕೆಗಳನ್ನು ನಾನು ನೀಡಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದೇನೆ. ನನ್ನ ಹೆಸರನ್ನು ಬಳಸಿಕೊಂಡು ವಿನಾಕಾರಣ ಹೆಸರಿಗೆ ಚ್ಯುತಿ ತರುವ ಕೆಲಸವನ್ನು ಮಾಡಿರುವವರನ್ನು ಪತ್ತೆ ಹಚ್ಚಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಂದು ಶಿಲ್ಪಾ ಗಣೇಶ್ ದೂರು ನೀಡಿದ್ದಾರೆ.
 
ಆರ್ ಆರ್ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

SCROLL FOR NEXT