ರಾಜ್ಯ

ಬೇಲಿ ಹಾರಿ ಸಿಎಂ ಕಚೇರಿಗೆ ಬಿದ್ದ ಗಾಲ್ಫ್ ಚೆಂಡು; ಕೆಲ ಕಾಲ ಆತಂಕ

Manjula VN
ಬೆಂಗಳೂರು; ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾ ಎದುರಿಗಿರುವ ಗಾಲ್ಫ್ ಕ್ಲಬ್'ನಿಂದ 16 ಅಡಿ ತಡೆ ಪರದೆ ದಾಟಿಕೊಂಡು ಬಂದ ಚೆಂಡೊಂದು ಕೃಷ್ಣಾದ ಆವರಣಕ್ಕೆ ಬಿದ್ದ ಪರಿಣಾಮ, ಸ್ಥಳದಲ್ಲಿ ಕೆಲ ಕಾಲ ಆತಂಕ ಮನೆ ಮಾಡಿತ್ತು. 
ಶನಿವಾರ ಸಂಜೆ ಕೃಷ್ಣಾ ಆವರಣದಲ್ಲಿ ನಿಂದಿದ್ದ ನಗರದ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರ ಕಾರಿನ ಗಾಜಿಗೆ ಚೆಂಡು ಬಿದ್ದಿತ್ತು. ಚೆಂದು ಬಿದ್ದ ರಭಸಕ್ಕೆ ಕಾರಿನ ಮುಂಭಾಗದ ಗಾಜು ಪುಡಿಪುಡಿಯಾಗಿತ್ತು. 
ಕಾರ್ಯನಿಮಿತ್ತ ಸಿಎಂ ಗೃಹ ಕಚೇರಿ ಕೃಷ್ಣಗೆ ಸೀಮಂತ್ ಕುಮಾರ್ ಸಿಂಗ್ ಅವರು ಸರ್ಕಾರಿ ಕಾರು ಇನ್ನೋವಾದಲ್ಲಿ ಆಗಮಿಸಿದ್ದರು. ಈ ವೇಳೆ ಪಾರ್ಕಿಂಗ್ ಮಾಡಲಾಗಿದ್ದ ಕಾರಿನ ಮೇಲೆ ಗಾಲ್ಫ್ ಚೆಂಡು ಬಿದ್ದಿದ್ದು, ಗಾಜು ಜಖಂಗೊಂಡಿತ್ತು. ಇದರಿಂದ ಪೊಲೀಸರು ಹಾಗೂ ಕಚೇರಿಯಲ್ಲಿದ್ದ ಸಿಬ್ಬಂದಿ ಹಾಗೂ ಸಂದರ್ಶಕರು ಆತಂಕಗೊಂಡರು. ಘಟನೆ ಸಂಬಂಧ ಸೀಮಾಂತ್ ಕುಮಾರ್ ಸಿಂಗ್ ಅವರ ಸಹಾಕ ಸಿಬ್ಬಂದಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 
ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ವಿಧಾನಸೌಧ, ವಿಕಾಸಸೌಧ, ಲೋಕಾಯುಕ್ತ ಹಾಗೂ ಮುಖ್ಯಮಂತ್ರಿಗಳ ಗೃಹ ಕಚೇರಿಯನ್ನು ಹೆಚ್ಚುವರಿ ಭದ್ರತಾ ವಲಯಗಳಾಗಿ ಘೋಷಣೆ ಮಾಡಲಾಗುವುದು ಎಂದು ಹೇಳಿದ್ದಾರೆ. ಅಲ್ಲದೆ, ಭದ್ರತಾ ಲೋಪ ಉಂಟಾಗದಂತೆ ವಿಧಾನಸೌಧದ ಸುತ್ತ ಹಾಗೂ ಮುಖ್ಯಮಂತ್ರಿಗಳ ಗೃಹ ಕಚೇರಿ, ನಿವಾಸಕ್ಕೆ ಭದ್ರತೆ ಒದಗಿಸಲು ನೂರು ಮಂದಿಯ ಪ್ರತ್ಯೇಕ ರಕ್ಷಣಾ ದಳ ರಚನೆ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. 
SCROLL FOR NEXT