ಕರ್ನಾಟಕ; ಇಂದಿನಿಂದ ಶಿರಾಡಿ ಘಾಟ್ ಸಂಚಾರ ಮುಕ್ತ
ಮಂಗಳೂರು: ಬೆಂಗಳೂರಿನಿಂದ ಹಾಸನ ಮಾರ್ಗವಾಗಿ ಕರಾವಳಿಗೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ 75ರ 2ನೇ ಹಂತದ ಕಾಂಕ್ರಿಟ್ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು, ಭಾನುವಾರದಿಂದ ಸಂಚಾರ ಮುಕ್ತಗೊಳ್ಳಲಿದೆ.
ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಅವರು ಭಾನುವಾರ ಹಸಿರು ನಿಶಾನೆ ತೋರಲಿದ್ದು, ಬೆಳಿಗ್ಗೆ 11.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಸಂಸದ ನಳೀನ್ ಕುಮಾರ್ ಕಟೀಲ್, ಸಕಲೇಶಪುರ ಶಾಸಕ ಹೆಚ್.ಕೆ. ಕುಮಾರಸ್ವಾಮಿ ಪಾಲ್ಗೊಳ್ಳಲಿದ್ದಾರೆ.
ರಸ್ತೆ ನಿರ್ಮಾಣ ಕಾರ್ಯಗಳನ್ನು ಪೂರ್ಣಗೊಳಿಸಲು ಮತ್ತೊಂದು ವಾರ ಕಾಲಾವಕಾಶಕ್ಕೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ, ಈಗಾಗಲೇ ಎರಡು ಭಾರಿ ಗಡುವನ್ನು ವಿಸ್ತರಣೆ ಮಾಡಲಾಗಿದ್ದು, ಮತ್ತಷ್ಟು ಕಾಲಾವಕಾಶ ನೀಡಲು ಸಾಧ್ಯವಿಲ್ಲ ಎಂದು ಸರ್ಕಾರ ನಿರಾಕರಿಸಿತ್ತು. ಶಿರಾಡಿ ಘಾಟ್ ರಸ್ತೆಯನ್ನು ಬಂದ್ ಮಾಡಿದ್ದರಿಂದಾಗಿ ಮಂಗಳೂರಿನಿಂದ ಬೆಂಗಳೂರಿಗೆ ಬರಲು 8-9 ಗಂಟೆಗಳ ಬದಲಾಗಿ 10-11 ಗಂಟೆಗಳ ಕಾಲ ತೆಗೆದುಕೊಳ್ಳುತ್ತಿದೆ. ರಸ್ತೆಯನ್ನು ಮುಕ್ತಗೊಳಿಸುವುದರಿಂದ ಸಾವಿರಾರು ಜನರಿಗೆ ಸಹಾಯಕವಾಗಲಿದೆ ಎಂದು ಪಿಡಬ್ಲ್ಯೂಡಿ ಮೂಲಗಳು ಮಾಹಿತಿ ನೀಡಿವೆ.