ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್
ಬೆಂಗಳೂರು: ಬೀದರ್ ಮಕ್ಕಳ ಕಳ್ಳ ಶಂಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೋಮವಾರ ಸೂಚನೆ ನೀಡಿದ್ದಾರೆ.
ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಜಿಗೆ ಸೂಚನೆ ನೀಡಲಾಗಿದೆ. ಜನರು ಕಾನೂನು ಕೈಗೆತ್ತಿಕೊಳ್ಳಬಾರದು. ಪ್ರಕರಣ ಸಂಬಂಧ ಈ ವರೆಗೂ 30 ಮಂದಿಯನ್ನು ಬಂಧನಕ್ಕೊಳಪಡಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಬೀದರ್ ಜಿಲ್ಲೆಯ ಔರಾದ್ ನಲ್ಲಿರುವ ಸ್ನೇಹಿತ ಬಶೀರ್ ಭೇಟಿಗೆಂದು ಆಜಂ ಅಹ್ಮದ್, ಸಲಾಂ ಹಾಗೂ ಇನ್ನೊಬ್ಬ ಗೆಳೆಯ ಮತ್ತು ಮೊಹಮ್ಮದ್ ಸಲ್ಮಾನ್ ಅವರು ಕಾರಿನಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಶಾಲೆಯಿಂದ ಮನೆಗೆ ತೆರಳುತ್ತಿದ್ದ ಮಕ್ಕಳನ್ನು ಕಂಡ ಅವರು, ವಿದೇಶದಿಂದ ತರಲಾಗಿದ್ದ ಚಾಕೋಲೇಟ್'ಗಳನ್ನು ನೀಡಿದ್ದರು.
ಈ ವೇಳೆ ಇವರನ್ನು ಮಕ್ಕಳ ಕಳ್ಳರು ಎಂದು ಭಾವಿಸಿದ್ದ ಗ್ರಾಮಸ್ಥರು, ಈ ಮೂವರ ಮೇಲೆ ಹಲ್ಲೆ ಮಾಡಿದ್ದರಿಂದ ಆಜಂ ಸಾವನ್ನಪ್ಪಿದ್ದರು. ಗಾಯಗೊಂಡಿದ್ದ ಸಲಾಂ ಮತ್ತು ಸಲ್ಮಾನ್ ರನ್ನು ಹೈದರಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿದೆ.