ಬೆಂಗಳೂರು:ನಮ್ಮ ಮೆಟ್ರೋದ ಎಲ್ಲ ಯೋಜನೆಗಳನ್ನು ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸುವಂತೆ ಬೆಂಗಳೂರು ಮೆಟ್ರೋ ರೈಲು ಅಭಿವೃದ್ದಿ ನಿಗಮಕ್ಕೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸೂಚನೆ ನೀಡಿದ್ದಾರೆ.
ವಿಧಾನಸೌಧದ ಉಪಮುಖ್ಯಮಂತ್ರಿಗಳ ಕಚೇರಿಯಲ್ಲಿಂದು ನೂತನ ವ್ಯವಸ್ಥಾಪಕ ನಿರ್ದೇಶಕ ಅಜೇಯ್ ಸೇಠ್ ಅವರೊಂದಿಗೆ ಚರ್ಚೆ ನಡೆಸಿದ ಸಂದರ್ಭದಲ್ಲಿ ಪ್ರಗತಿಯಲ್ಲಿರುವ ಎಲ್ಲ ಯೋಜನೆಗಳನ್ನು ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸುವಂತೆ ತಿಳಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಂಆರ್ ಸಿಎಲ್ ನ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಅಜಯ್ ಸೇಠ್ ನೇಮಕಗೊಂಡಿದ್ದು, ಶೀಘ್ರದಲ್ಲಿಯೇ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿದ್ದೇನೆ. ಎಲ್ಲ ಯೋಜನೆಗಳು ತ್ವರಿತಗತಿಯಲ್ಲಿ ಆಗಬೇಕು ಎಂದು ತಿಳಿಸಿರುವುದಾಗಿ ಹೇಳಿದರು.
ಸರ್ಕಾರದಿಂದ ಮೆಟ್ರೋಗೆ ಸಂಬಂದಿಸಿದಂತೆ ಹಲವು ಮಂಜೂರಾತಿಗಳು, ಹಣಕಾಸು ಸೌಲಭ್ಯ ದೊರಕಿಸಿಕೊಡುವಂತೆ ಅಜಯ್ ಸೇಠ್ ಮನವಿ ಮಾಡಿದ್ದಾರೆ. ಆ ಕೆಲಸವನ್ನು ಆದಷ್ಟು ಶೀಘ್ರವೇ ಮಾಡಿಕೊಡುವ ಭರವಸೆ ನೀಡಲಾಗಿದೆ. ಬಿಎಂಆರ್ ಸಿಎಲ್ ಕಾಮಗಾರಿಗಳನ್ನು ಚುರುಕುಗೊಳಿಸುವ ಸಂಬಂಧ ಎಲ್ಲಾ ಸಲಹೆ, ಸೂಚನೆಗಳನ್ನು ನೀಡಿರುವುದಾಗಿ ಪರಮೇಶ್ವರ್ ತಿಳಿಸಿದರು