ಹಾಸನ: ಪತಿಯನ್ನು ಕೊಂದು ’ರೈತ ಆತ್ಮಹತ್ಯೆ’ ಎಂದು ಬಿಂಬಿಸಿದ್ದ ಪತ್ನಿ ಬಂಧನ
ಹಾಸನ: ಹಾಸನ ರೈತ ಯೋಗೀಶ್ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಸರ್ಕಾರದಿಂದ ಪರಿಹಾರ ಹಣ ಪಡೆಯುವ ಸಲುವಾಗಿ ಪತ್ನಿ ಮತ್ತು ಮಗ ಸೇರಿ ನಡೆಸಿದ ಕೊಲೆ ಇದು ಎನ್ನುವುದು ತನಿಖೆ ವೇಳೆ ಬಯಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಗಾಯತ್ರಿ ಹಾಗೂ ದರ್ಶನ್ ಎನ್ನುವವರನ್ನು ಬಂಧಿಸಿರುವ ಪೋಲೀಸರು ವಿವರವಾದ ವಿಚಾರಣೆ ನಡೆಸಿದ್ದಾರೆ.
ಜೂನ್ 8 ರಂದು ರೈತ ಯೋಗೇಶ್ (45} ಎನ್ನುವಾತ ಸಾಲದ ಬಾಧೆ ತಾಳಲಾರದೆ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಗಿ ವರದಿಯಾಗಿತ್ತು. ಮನೆಯ ಕೋಣೆಯೊಂದರಲ್ಲಿ ಯೋಗೀಶ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.ತನ್ನ ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪತ್ನಿ ಗಾಯತ್ರಿ ಪೋಲೀಸರಿಗೆ ದೂರು ಸಲ್ಲಿಸಿದ್ದಳು.
ಆದರೆ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಸತ್ಯ ಬಯಲಾಗಿದೆ. ರೈತ ಯೋಗೀಶ್ ಆತ್ಮಹತ್ಯೆ ಮಾಡಿಕೊಂಡಿಲ್ಲ, ಇದು ಕೊಲೆ ಎಂದು ವರದಿ ಬಂದಿದೆ.ಈ ಸಂಬಂಧ ಪೋಲೀಸರು ಗಾಯತ್ರಿ ಹಾಗೂ ಪುತ್ರ ದರ್ಶನ್ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಅವರು ತಾವೇ ಈ ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.
ಗಾಯತ್ರಿ ಮತ್ತು ಪುತ್ರ ದರ್ಶನ್ ಸೇರಿ ಯೋಗೀಶ್ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.ಬಳಿಕ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬಿಂಬಿಸಿ ಕಥೆ ಕಟ್ಟಿದ್ದಾರೆ. ಆತ್ಮಹತ್ಯೆ ಎಂದು ಸಾಬೀತಾದರೆ ಸರ್ಕಾರದಿಂದ ಪರಿಹಾರದ ಹಣ ದೊರೆಯುತ್ತದೆ. ಹೀಗಾಗಿ ಪತಿಯನ್ನು ನಾನೇ ಕೊಂದು ಶವವನ್ನು ಕೋಣೆಯಲ್ಲಿ ನೇತು ಹಾಕಿದ್ದೆ ಎಂದು ಪತ್ನಿ ಗಾಯತ್ರಿ ಪೋಲೀಸರೆದುರು ಹೇಳಿಕೆ ನಿಡಿದ್ದಾಳೆ.