ಉಡುಪಿ: ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠಾಧೀಶ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿಗಳ ಸಾವು ಸಹಜ ಸಾವಲ್ಲ. ಇದೊಂದು ಕೊಲೆ ಎಂದು ಆರೋಪಿಸಿ ಶ್ರೀಗಳ ಸಹೋದರ ಲಾತವ್ಯ ಆಚಾರ್ಯ ಅವರು ಹಿರಿಯಡ್ಕ ಪೊಲೀಸ್ ಠಾಣೆಗೆ ಗುರುವಾರ ದೂರು ನೀಡಿದ್ದಾರೆ.
ಶಿರೂರು ಶ್ರೀಗಳು ವಿಷ ಸೇವನೆಯಿಂದ ಮೃತಪಟ್ಟಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ಕಾನೂನು ಕ್ರಮಕೈಗೊಳ್ಳುವಂತೆ ಲಾತವ್ಯ ಆಚಾರ್ಯ ಅವರು ಕೋರಿದ್ದಾರೆ.
ಲಾತವ್ಯ ಆಚಾರ್ಯ ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ ಎಂದು ಹಿರಿಯಡ್ಕ ಪೊಲೀಸರು ತಿಳಿಸಿದ್ದಾರೆ.
ಇನ್ನು ಶ್ರೀಗಳ ಅನುಮಾನಾಸ್ಪದ ಸಾವಿನ ಬಗ್ಗೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ.ಜಿ ಪರಮೇಶ್ವರ ಅವರು, ಶಿರೂರು ಮಠದ ಶ್ರೀಗಳ ಸಾವಿನ ಬಗ್ಗೆ ಶಂಕೆ ಇದ್ದಲ್ಲಿ ಸೂಕ್ತ ತನಿಖೆ ನಡೆಸುತ್ತೇವೆ ಎಂದಿದ್ದಾರೆ.
ಕಳೆದ ಮಂಗಳವಾರ ಶಿರೂರಿನಲ್ಲಿ ನಡೆದಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಕ್ಕಳ ಜತೆ ಊಟ ಮಾಡಿದ್ದ ಶ್ರೀಗಳ ಆಹಾರದಲ್ಲಿ ವ್ಯತ್ಯಯವಾಗಿ ವಾಂತಿಬೇಧಿ ಸಹಿತ ಉದರ ಸಂಬಂಧಿ ಸಮಸ್ಯೆ ತಲೆದೋರಿತ್ತು.
ಮಂಗಳವಾರ ರಾತ್ರಿ ಅನಾರೋಗ್ಯ ತೀವ್ರಗೊಂಡ ಹಿನ್ನೆಲೆಯಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಶ್ರೀಗಳ ದೇಹದಲ್ಲಿ ವಿಷಪ್ರಾಶನ ಆಗಿರುವ ಶಂಕೆಯಿದ್ದು, ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಗಿದೆ.