ಉತ್ತರ ಕನ್ನಡ: ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠಾಧೀಶ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಮಠಾಧೀಶರೇ ಅಲ್ಲ. ಅವರು ಸನ್ಯಾಸತ್ವ ತ್ಯಜಿಸಿದ್ದರು ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಗಳು ಗುರುವಾರ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಇಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪೇಜಾವರ ಶ್ರೀಗಳು, ಅವರು ಮಠಾಧೀಶರೇ ಅಲ್ಲ. ಹೀಗಾಗಿ ನಿಯಮಗಳ ಪ್ರಕಾರ ಶಿರೂರು ಶ್ರೀಗಳ ಅಂತಿಮ ದರ್ಶನಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.
ಶಿರೂರು ಶ್ರೀ ಸನ್ಯಾಸತ್ವದಲ್ಲಿ ಭ್ರಷ್ಟರಾಗಿದ್ದರು. ಶಿರೂರು ಶ್ರೀಗಳು ತಮಗೆ ಮಕ್ಕಳಿದ್ದಾರೆ ಎಂದು ಅವರೇ ಹೇಳಿಕೊಂಡಿದ್ದರು. ಹಾಗಾಗಿ ಅವರಿಗೆ ಪಟ್ಟದ ದೇವರು ನೀಡಿಲ್ಲ. ಉಡುಪಿ ಮಠದ ಮಧ್ವ ಪರಂಪರೆಗೆ ವಿರುದ್ಧವಾಗಿ ಅವರು ನಡೆದುಕೊಂಡಿದ್ದರು. ಬಹಿರಂಗವಾಗಿ ಸನ್ಯಾಸತ್ವವನ್ನು ತ್ಯಜಿಸಿದ್ದರು. ಅವರು ಸಂಸಾರಿಯಾಗುವ ಮೂಲಕ ಮಡಿವಂತಿಕೆಯನ್ನು ಬಿಟ್ಟಿದ್ದರು. ಅವರೊಬ್ಬ ಭ್ರಷ್ಟ ಸನ್ಯಾಸಿ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಶಿರೂರು ಶ್ರೀ ಅಂತ್ಯಸಂಸ್ಕಾರದ ವೇಳೆ ಹಾಜರಾಗಲೇಬೇಕು ಎಂಬ ನಿಯಮಗಳಿಲ್ಲ. ಹಾಗಾಗಿ ಅವರ ಅಂತಿಮ ದರ್ಶನ ಪಡೆಯಲು ನಾನು ಹೊಗುವುದಿಲ್ಲ ಎಂದು ಪೇಜಾವರ ಶ್ರೀಗಳು ತಿಳಿಸಿದ್ದಾರೆ.