ಬೆಂಗಳೂರು: ಅನಗತ್ಯವಾಗಿ ಸಾರ್ವಜನಿಕ ಹಿತಾಸಕ್ತಿ ಆರ್ಜಿ (ಪಿಐಎಲ್) ಸಲ್ಲಿಸಿ, ನ್ಯಾಯಾಲಯದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿದ ಕಾರಣಕ್ಕೆ ಅರ್ಜಿದಾರನ ವಿರುದ್ಧ ತೀವ್ರ ಕಿಡಿಕಾರಿರುವ ಹೈಕೋರ್ಟ್, ಅರ್ಜಿದಾರನಿಗೆ ರೂ.15 ಲಕ್ಷ ದಂಡ ವಿಧಿಸಿದೆ.
ತುಮಕೂರು ಜಿಲ್ಲೆಯ ತಿಪಟೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ರೂ.3.5 ಕೋಟಿ ವೆಚ್ಚದಲ್ಲಿ ನೂತನ ಆಡಳಿತ ಕಚೇರಿ ಕಟ್ಟಡ ನಿರ್ಮಾಣ ಮಾಡಲು ಕರೆದಿದ್ದ ಟೆಂಡರ್ ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದವರಿಗೆ ನ್ಯಾಯಾಲಯದ ದಂಡ ವಿಧಿಸಿದೆ.
ತಿಪಟೂರಿನಲ್ಲಿ 1989ರಲ್ಲಿ ಎಪಿಎಂಸಿ ಕಟ್ಟಡ ನಿರ್ಮಿಸಲಾಗಿತ್ತು. 2013-14ರಲ್ಲಿ ಎರಡು ಬಾರಿ ಆಡಳಿತ ಕಚೇರಿಯ್ನು ನವೀಕರಿಸಲಾಗಿತ್ತು. ಈ ನಡುವೆ ಅನಗತ್ಯವಾಗಿ ರೂ.3.5 ಕೋಟಿ ವೆಚ್ಚದಲ್ಲಿ ಆಡಳಿತ ಕಚೇರಿಗಾಗಿ ಹೊಸ ಕಟ್ಟಡ ನಿರ್ಮಿಸಲು 2016ರಲ್ಲಿ ಎಪಿಎಂಸಿ ನಿರ್ಣಯಿಸಿದೆ. 2017ರ ಮೇ 19ರಂದು ಟೆಂಡರ್ ಕರೆದಿದೆ ಎಂದು ಆರೋಪಿಸಿ ತಿಪಟೂರು ತಾಲೂಕಿನ ಬೆನ್ನಾಯಕನಹಳ್ಳಿ ಗ್ರಾಮದ ಬಿ.ಎಸ್.ದೇವರಾಜು ಮತ್ತು ಹೂಗವನಘಟ್ಟದ ಹೆಚ್.ವಿ.ದಿವಾಕರ್ ಸೇರಿ 11 ಮಂದಿ ಹೈಕೋರ್ಟ್'ಗೆ ಪಿಐಎಲ್ ಸಲ್ಲಿಸಿದ್ದರು.
ಈ ಅರ್ಜಿಯನ್ನು ನಿನ್ನೆ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಪೀಠ, ಅನಗತ್ಯವಾಗಿ ಪಿಐಎಲ್ ಸಲ್ಲಿಸಿ, ನ್ಯಾಯಾಲಯದ ಅಮೂಲ್ಯ ಸಮಯವನ್ನುವ್ಯರ್ಥ ಮಾಡಲಾಗಿದೆ. ಅರ್ಜಿದಾರರ ಧೋರಣೆ ಸಹಿಸಲು ಸಾಧ್ಯವಿಲ್ಲ ಎಂದಿರುವ ನ್ಯಾಯಪೀಠ, ಪ್ರಕರಣದ ಎರಡನೇ ಅರ್ಜಿದಾರ ಹೆಚ್.ಬಿ.ದಿವಾಕರ್ ಅವರಿಗೆ ರೂ.5 ಲಕ್ಷ ಹಾಗೂ ಇತರೆ 10 ಅರ್ಜಿದಾರರಿಗೆ ತಲಾ ರೂ.1 ಲಕ್ಷ ದಂಡ ವಿಧಿಸಿದೆ. ಅರ್ಜಿದಾರರು ದಂಡದ ಮೊತ್ತವನ್ನು 40 ದಿನಗಳಲ್ಲಿ ತುಮಕೂರು ಜಿಲ್ಲಾಧಿಕಾರಿಗೆ ಪಾವತಿ ಮಾಡಬೇಕು. ದಂಡ ಪಾವತಿ ಮಾಡದಿದ್ದರೆ, ಅವರ ವಿರುದ್ಧ ಜಿಲ್ಲಾಧಿಕಾರಿ ಕಾನೂನು ಕ್ರಮ ಕೈಗೊಳ್ಳಬಹುದು. ಅರ್ಜಿದಾರರು ಪಾವತಿಸುವ ದಂಡದ ಹಣವನ್ನು ಜಿಲ್ಲಾಧಿಕಾರಿ ಎಂಪಿಎಂಸಿಯ ಅಭಿವೃದ್ಧಿ ಕಾರ್ಯಕ್ಕೆ ಬಳಸಿಕೊಳ್ಳಬಹುದು ಎಂದು ನ್ಯಾಯಪೀಠ ತಿಳಿಸಿದೆ. ಅಲ್ಲದೆ, 11 ಮಂದಿ ಸಲ್ಲಿಸಿದ್ದ ಪಿಐಎಲ್ ಅನ್ನು ವಜಾಗೊಳಿಸಿ ಆದೇಶಿಸಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos