ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆ ಅಬ್ಬರ ಮುಂದುವರೆದಿದೆ. ಕೆಲವು ಕಡೆಗಳಲ್ಲಿ ಮರಗಳು ನೆಲಕ್ಕುರುಳಿದ ಬಗ್ಗೆ ವರದಿಯಾಗಿದೆ. ಗುರುವಾರ ರಾತ್ರಿ ಮಂಗಳೂರು ನಗರದಲ್ಲಿ ಭಾರೀ ಗಾತ್ರದ ಮರವೊಂದು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿ ಬಿದಿದ್ದೆ. ಅದೃಷ್ಟವಶಾತ್ ಯಾರಿಗೂ ಗಾಯವಾಗಿಲ್ಲ. ಆದರೆ, ಮರದ ಕೆಳಗೆ ನಿಂತಿದ್ದ ಬಸ್ ಗೆ ಸ್ವಲ್ಪ ಪ್ರಮಾಣದ ಹಾನಿಯಾಗಿದೆ.
ಪುತ್ತೂರು ತಾಲೂಕಿನಲ್ಲಿ ಶಾಲಾ ಕಟ್ಟಡ ಮೇಲ್ಛಾವಣಿ ಮೇಲೆ ಮರವೊಂದು ಉರುಳಿ ಬಿದಿದ್ದೆ. ಭಾರೀ ಮಳೆಯಿಂದಾಗಿ ಶಾಲೆಗೆ ಹೊಂದಿಕೊಂಡಂತಿರುವ ಅಡಿಕೆ ಮರವೊಂದು ಉರುಳಿ ಬಿದ್ದಿದ್ದು, ಶಾಲಾ ಕಚೇರಿಯ ಕೊಠಡಿ ಹಾನಿಯಾಗಿದೆ . ಆದರೆ, ಯಾರೊಬ್ಬರು ಗಾಯಗೊಂಡಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ ಒಂದೇ ದಿನ 72. 8 ಮಿಲಿ ಮೀಟರ್ ಮಳೆ ದಾಖಲಾಗಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಉತ್ತಮ ಮಳೆಯಾಗುತ್ತಿದ್ದು, ಬೆಳ್ತಂಗಡಿಯಲ್ಲಿ 77.3, ಬಂಟ್ವಾಳದಲ್ಲಿ 71. 1, ಮಂಗಳೂರಿನಲ್ಲಿ 70.1 ಪುತ್ತೂರಿನಲ್ಲಿ 70, ಸುಳ್ಯದಲ್ಲಿ 76 ಮಿಲಿ ಮೀಟರ್ ಮಳೆಯಾಗಿದೆ.
ಜುಲೈ 1 ರಿಂದ ಈವರೆಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 906 ಮಿಲಿ ಮೀಟರ್ ಮಳೆಯಾಗಿದೆ. ಉಡುಪಿಯಲ್ಲಿ 973 ಮಿ. ಮೀ. ಮಳೆ ದಾಖಲಾಗಿದೆ. ಉಳ್ಳಾಲ್ ನಲ್ಲಿ ಕಾಲುವೆಯಿಂದ ಕೃಷಿಭೂಮಿಗೆ ನುಗ್ಗಿರುವ ಬಗ್ಗೆ ರೈತರು ದೂರು ನೀಡಿದ್ದಾರೆ. ಮಳೆಯಿಂದಾಗಿ ಅಂದಾಜು ಶೇ. 30 ರಷ್ಟು ಬೆಳೆ ನಷ್ಟವಾಗಿರುವ ಬಗ್ಗೆ ವರದಿಯಾಗಿದ್ದು, ಜಿಲ್ಲಾಡಳಿತ ಹಾನಿ ಕುರಿತು ಅಧ್ಯಯನ ನಡೆಸುತ್ತಿದೆ.