ದೋಣಿಗಳಲ್ಲಿ ಸಂಚತರಿಸುತ್ತಿರುವ ಬಾಗಲಕೋಟೆ ಗ್ರಾಮಸ್ಥರು
ಬೆಳಗಾವಿ: ಮಹಾರಾಷ್ಟ್ರದ ಜಲಾಶಯಗಳಿಂದ ಅಧಿಕ ಪ್ರಮಾಣದಲ್ಲಿ ನೀರು ಬಿಡುತ್ತಿರುವ ಕಾರಣ ಬೆಳಗಾವಿಯ ಹಲವು ಪ್ರದೇಶಗಳಿಗೆ ಪ್ರವಾಹ ಎಚ್ಚರಿಕೆ ನೀಡಲಾಗಿದೆ,
ಈ ಸಂಬಂಧ ಜಿಲ್ಲೆಯ ಹಿರಿಯ ಅಧಿಕಾರಿಗಳ ಜೊತೆ ಚಿಕ್ಕೋಡಿಯಲ್ಲಿ ಸಭೆ ನಡೆಸಿದ ಸಚಿವ ರಮೇಶ್ ಜಾರಕಿಹೊಳಿ ಪ್ರವಾಹ ಸಂದರ್ಭ ಉಂಟಾದರೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
ಗಡಿ ಭಾಗದಲ್ಲಿರುವ ಜಲಾಶಯಗಳಿಂದ ಮಹಾರಾಷ್ಟ ಹೆಚ್ಚುವರಿ ನೀರು ಹರಿಸಿದ ವೇಳೆ ಈ ಭಾಗದಲ್ಲಿ ಹಲವು ಬಾರಿ ಪ್ರವಾಹ ಉಂಟಾಗಿದೆ.
ಕೋಯ್ನಾ ಸೇರಿದಂತೆ ಮಹಾರಾಷ್ಟ್ರದ ಹಲವು ನದಿಗಳು ತುಂಬಿರುವ ಬಗ್ಗೆ ನನಗೆ ಮಾಹಿತಿ ಬಂದಿದೆ ಎಂದು ಜಾರಕಿ ಹೊಳಿ ಹೇಳಿದ್ದಾರೆ, ಆಗಸ್ಟ್ 5ನೇ ವಾರದಲ್ಲಿ ಮಹಾರಾಷ್ಟ್ರ ನೀರು ಬಿಡುಗಡೆ ಮಾಡಿದರೇ ಬೆಳಗಾವಿ ಪರಿಸ್ಥಿತಿ ತೀರಾ ಚಿಂತಜನಕವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಬಾಗಲಕೋಟೆ ಪ್ರದೇಶದಲ್ಲಿ ಪ್ರವಾಹ ಭೀತಿ ಎದುರಾಗಿದೆ, ನಾವು ಹಲವು ವರ್ಷಗಳಿಂದ ಇಲ್ಲಿ ನೆಲೆಸಿದ್ದೇವೆ, ಇಲ್ಲಿ ಕೃಷಿ ಮಾಡಿಕೊಂಡು ನಾವು ಅದರಿಂದ ಬಂದ ಹಣದಲ್ಲಿ ಊಟ ಮಾಡುತ್ತಿದ್ದೇವೆ, ಇಲ್ಲಿಂದ ಹೋಗಿ ಬೇರೆ ಕಡೆ ನೆಲೆಸುವುದು ಕಷ್ಟಸಾಧ್ಯ ಎಂದು ಸಾಲ್ಗುಂದಿ ಗ್ರಾಮದ ರೈತ ರಾಮಪ್ಪ ಗೋನಿ ತಿಳಿಸಿದ್ದಾರೆ, ಬಾಗಲಕೋಟೆಯ ಸುಮಾರು 50 ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.