ರಾಜ್ಯ

ನನಗೆ ಮಕ್ಕಳಿರುವುದು ಸಾಬೀತಾದರೆ ಪೀಠತ್ಯಾಗ: ಪೇಜಾವರ ಶ್ರೀಗಳ ಬಹಿರಂಗ ಸವಾಲು

Vishwanath S
ಚೆನ್ನೈ/ಉಡುಪಿ: ನನಗೆ ಮಕ್ಕಳಿರುವುದು ಸಾಬೀತುಪಡಿಸಿದರೆ ಪೀಠತ್ಯಾಗ ಮಾಡುವುದಾಗಿ ಪೇಜಾವರ ಮಠದ ವಿಶ್ವೇಶ್ವರತೀರ್ಥ ಸ್ವಾಮೀಜಿಗಳು ಹೇಳಿದ್ದಾರೆ. 
ಕಳೆದ ಗುರುವಾರ ಅನುಮಾನಾಸ್ಪದವಾಗಿ ಮೃತಪಟ್ಟ ಉಡುಪಿ ಅಷ್ಟಮಠಗಳಲ್ಲಿ ಒಂದಾಗಿರುವ ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮಿಗಳು ಸಾವಿಗು ನಾಲ್ಕು ದಿನಗಳ ಮುನ್ನ ಮಾತನಾಡಿದ್ದರು ಎನ್ನಲಾದ ಆಡಿಯೋ ಟೇಪ್ ಬಿಡುಗಡೆಯಾಗಿದ್ದು ಇದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. 
ಇನ್ನು ಲಕ್ಷ್ಮೀವರ ತೀರ್ಥ ಸ್ವಾಮಿಗಳು ಆಡಿಯೋದಲ್ಲಿ ಪೇಜಾವರ ಶ್ರೀಗಳ ವಿರುದ್ಧವಾಗಿಯೂ ಮಾತನಾಡಿದ್ದರು. ಅಜ್ಜ(ಪೇಜಾವರ ಶ್ರೀ)ನಿಗೆ ಮೂವರು ಮಕ್ಕಳಿದ್ದಾರೆ. ಅವರಲ್ಲಿ ಒಬ್ಬರು ಡಾ. ಉಷಾ ಅಂತ. ಅವರು ಚೆನ್ನೈನಲ್ಲಿ ವೈದ್ಯರಾಗಿದ್ದಾರೆ. ಅಜ್ಜ ತಮಿಳುನಾಡಿನಲ್ಲಿ ಮಹಿಳೆ ಜತೆ ಸಂಬಂಧ ಹೊಂದಿದ್ದು ಅವರ ಇತ್ತೀಚಿಗೆ ತೀರಿಕೊಂಡಿದ್ದರು. ಹೀಗೆ ಹಲವು ವಿಚಾರಗಳ ಕುರಿತು ಶಿರೂರು ಶ್ರೀಗಳು ಆಡಿಯೋ ಟೇಪ್ ನಲ್ಲಿ ಮಾತನಾಡಿದ್ದರು. 
ಆಡಿಯೋ ಟೇಪ್ ನಲ್ಲಿನ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಪೇಜಾವರ ಮಠದ ವಿಶ್ವೇಶ್ವರತೀರ್ಥ ಶ್ರೀಗಳು ಮಾಧ್ಯಮ ಪ್ರಕಟಣೆ ನೀಡಿದ್ದು ತಮ್ಮ ವಿರುದ್ಧ ಆರೋಪಗಳು ಶುದ್ಧ ಸುಳ್ಳು ಎಂದು ಹೇಳಿದ್ದಾರೆ. 
ತಾರುಣ್ಯದಲ್ಲಿ ಮಹಿಳೆಯರ ಜತೆ ನನಗೆ ಸಹವಾಸವಿತ್ತು ಎನ್ನುವುದು ಶುದ್ಧ ಸುಳ್ಳು. ತಮಿಳುನಾಡಿನಲ್ಲಿ ನನಗೆ ಮಗಳಿದ್ದಾಳೆ ಅನ್ನೋದು ಕಟ್ಟುಕಥೆ. ಇದೇ ಅಭಿಪ್ರಾಯ ಹೇಳಿ ಕೆಲವರು ನನಗೆ ಪತ್ರ ಬರೆದಿದ್ದರು. ಪತ್ರದಲ್ಲಿ ನನಗೆ ಗಂಡು ಮಗು ಇದೆ ಎಂದು ಬರೆಯಲಾಗಿತ್ತು. ಇದೆಲ್ಲವೂ ಕೇವಲ ಕಲ್ಪನೆ, ಯಾರೊಬ್ಬರೂ ನಂಬುವುದಿಲ್ಲ. ಈ ಸಂಬಂಧ ಯಾವುದೇ ಪರೀಕ್ಷೆ, ವಿಚಾರಣೆ ಎದುರಿಸಲು ನಾನು ಸಿದ್ಧ ಎಂದು ಹೇಳಿದ್ದು, ಒಂದು ವೇಳೆ ಆರೋಪ ಸಾಬೀತುಪಡಿಸಿದರೆ ನಾನು ಪೀಠತ್ಯಾಗ ಮಾಡುತ್ತೇನೆ ಎಂದು ಹೇಳಿದ್ದಾರೆ.
SCROLL FOR NEXT