ಬೆಂಗಳೂರು: ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ನರಳುತ್ತಿದ್ದ ಜ್ಯೋತಿಷಿಯೊಬ್ಬರನ್ನು ಆಸ್ಪತ್ರೆಗೆ ಕೊಂಡೊಯ್ಯಲು ಸೂಕ್ತ ಸಮಯಕ್ಕೆ ಆ್ಯಂಬುಲೆನ್ಸ್ ಬಾರದ ಕಾರಣ ಗಾಯಾಳು ಮೃತಪಟ್ಟಿರುವ ಘಟನೆ ಕೆ.ಆರ್.ಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.
ಅಕ್ಷಯನಗರದ ನಿವಾಸಿಯಾಗಿದ್ದ ವಿನೋದ್ (24) ಮೃತಪಟ್ಟ ಜ್ಯೋತಿಷಿ ಎಂದು ಹೇಳಲಾಗುತ್ತಿದೆ.
ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ವಿನೋದ್ ಅವರು ಮನೆಗೆ ವಾಪಸ್ಸಾಗುತ್ತಿದ್ದರು. ಟಿಸಿ ಪಾಳ್ಯದ ಮುಖ್ಯರಸ್ತೆಯ ಆನಂದಪುರ ಬಸ್ ನಿಲ್ದಾಣದ ಸಮೀಪ ಬೈಕ್ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿದೆ. ಪರಿಣಾಮ ವಿನೋದ್ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತ ಸಂಭವಿಸಿದ ವಿಚಾರ ತಿಳಿಯುತ್ತಿದ್ದಂತೆಯೇ ವಿನೋದ್ ಅವರನ್ನು ರಾಮಮೂರ್ತಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಸ್ಪತ್ರೆಯ ಸಿಬ್ಬಂದಿಗಳು ಸರಿಯಾಗಿ ಚಿಕಿತ್ಸೆ ನೀಡುತ್ತಿರಲಿಲ್ಲ. ಈ ವೇಳೆ ಆಸ್ಪತ್ರೆ ಸಿಬ್ಬಂದಿಗಳೊಂದಿಗೆ ಮಾತಿನ ಚಕಮಕಿಗಳೂ ಕೂಡ ನಡೆಯಿತು. ಬಳಿಕ ಮತ್ತೊಂದು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ತಿಳಿಸಿದ್ದೆ. ಮೊದಲು ದಾಖಲು ಮಾಡಲಾಗಿದ್ದ ಆಸ್ಪತ್ರೆಯಲ್ಲಿ ಎರಡು ಆ್ಯಂಬುಲೆನ್ಸ್ ಗಳಿದ್ದವು. ಆದರೆ, ಚಾಲಕರೇ ಇರಲಿಲ್ಲ. ಹೆಚ್ಎಎಲ್ ರಸ್ತೆಯಿಂದ ಮತ್ತೊಂದು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾಕಷ್ಟು ಸಮಯವಾಗಿತ್ತು. ಮತ್ತೊಂದು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ವಿನೋದ್ ಮೃತಪಟ್ಟಿದ್ದ ಎಂದು ವಿನೋದ್ ಸಂಬಂಧಿ ವೆಂಕಟೇಶ್ ಅವರು ಹೇಳಿದ್ದಾರೆ.
ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಂಚಾರಿ ಪೊಲೀಸರು ಸಂಜೆ 6.30ರ ಸುಮಾರಿಗೆ ಘಟನೆ ಸಂಭವಿಸಿತ್ತು. ನಿರ್ಮಾಣಹಂತದ ಕಟ್ಟಡವೊಂದಕ್ಕೆ ಭೇಟಿ ನೀಡಲು ವಿನೋದ್ ಹೊರಟಿದ್ದರು. ಟಿಸಿ ಪಾಳ್ಯ ಮುಖ್ಯ ರಸ್ತೆಯ ಆನಂದ್ ಪುರ ಬಸ್ ನಿಲ್ದಾಣ ಬಳಿ ಹೋಗುತ್ತಿದ್ದ ವೇಳೆ ವಾಹನ ಮೇಲಿದ್ದ ನಿಯಂತ್ರಣವನ್ನು ಕಳೆದುಕೊಂಡಿದ್ದಾರೆ. ಬಳಿಕ ಬೈಕ್ ಪಾದಚಾರಿ ಮಾರ್ಗಕ್ಕೆ ಡಿಕ್ಕಿ ಹೊಡೆದಿದೆ. ಸ್ಥಳೀಯರು ಕೂಡಲೇ ವಿನೋದ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಲ್ಮೆಟ್ ಹಾಕದ ಕಾರಣ ವಿನೋದ್ ಅವರ ತಲೆಗೆ ಗಂಭೀರವಾಗಿ ಗಾಯವಾಗಿತ್ತು ಎಂದು ತಿಳಿಸಿದ್ದಾರೆ.