ರಾಜ್ಯ

ಶಿರೂರು ಶ್ರೀ ಅಸಹಜ ಸಾವು ಪ್ರಕರಣ: ನಾಪತ್ತೆಯಾಗಿದ್ದ ಮಠದ ಸಿಸಿಟಿವಿ ಡಿವಿಆರ್ ಸ್ವರ್ಣಾ ನದಿಯಲ್ಲಿ ಪತ್ತೆ!

Srinivasamurthy VN
ಉಡುಪಿ: ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಅವರ ಅಸಹಜ ಸಾವು ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಈ ಹಿಂದೆ ನಾಪತ್ತೆಯಾಗಿದ್ದ ಮಠದ ಸಿಸಿಟಿವಿ ಡಿವಿಆರ್ ಸ್ವರ್ಣಾ ನದಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಮಾಧ್ಯಮಗಳು ವರದಿ ಮಾಡಿರುವಂತೆ ಇಂದು ಮುಂಜಾನೆ ಸ್ವರ್ಣಾ ನದಿಯಲ್ಲಿ ಸಿಸಿಟಿವಿ ಡಿವಿಆರ್ ಪತ್ತೆಯಾಗಿದ್ದು, ತೆಪ್ಪದಲ್ಲಿ ತೆರಳಿದ್ದ ಮುಳುಗು ತಜ್ಞರು ದೊಡ್ಡ ಅಯಸ್ಕಾಂತದ ಮೂಲಕ ಡಿವಿಆರ್ ಅನ್ನು ನೀರಿನಿಂದ ಮೇಲೆತ್ತಿದ್ದಾರೆ ಎಂದು ಹೇಳಲಾಗಿದೆ. ನಾಪತ್ತೆಯಾಗಿದ್ದ ಡಿವಿಆರ್ ಗಾಗಿ ಸೋಮವಾರ ಸಂಜೆಯಿಂದಲೇ ಹುಡುಕಾಟ ಆರಂಭಿಸಲಾಗಿತ್ತು. ಮಠಕ್ಕೆ ಸಮೀಪದಲ್ಲೇ ಇರುವ ಸ್ವರ್ಣಾ ನದಿಯಲ್ಲಿ ಡಿವಿಆರ್ ಅನ್ನು ಎಸೆದಿರುವ ಸಾದ್ಯತೆ ಮೇರೆಗೆ ನದಿಯಲ್ಲಿ ಮುಳುಗು ತಕ್ಷರ ನೆರವಿನಿಂದ ಹುಡುಕಾಟ ಆರಂಭಿಸಲಾಗಿತ್ತು. ಇದೀಗ ಡಿವಿಆರ್ ಪತ್ತೆ ಮಾಡುವಲ್ಲಿ ಕೊನೆಗೂ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
ಸಾವಿನ ಸಂಚು ಹೂಡಿದ್ದ ಸ್ವಾಮೀಜಿಯ ನಿಕಟವರ್ತಿಗಳೇ ಡಿವಿಆರ್‌ ಅನ್ನು ನದಿಗೆ ಎಸೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ಡಿವಿಆರ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿ ಅದರಲ್ಲಿರುವ ಮಾಹಿತಿ ಸಂಗ್ರಹಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ. 
ಶಿರೂರು ಸ್ವಾಮೀಜಿ ಚಿನ್ನಾಭರಣ ನಾಪತ್ತೆ?
ಇನ್ನು ಶಿರೂರು ಶ್ರೀಗಳ ಅಸಹಜ ಸಾವಿಗೆ ಮತ್ತೊಂದು ಟ್ವಿಸ್ಟ್ ದೊರೆತಿದ್ದು, ಅನಾರೋಗ್ಯದ ಕಾರಣ ಶ್ರೀಗಳು ಆಸ್ಪತ್ರೆ ಸೇರಿದ ಬೆನ್ನಲ್ಲೇ ಮಠದಲ್ಲಿದ್ದ ಸುಮಾರು 3 ಕೆಜಿಯಷ್ಟು ಚಿನ್ನಾಭರಣಗಳು ನಾಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಈ ಮೂರು ಕೆಜಿ ಚಿನ್ನಾಭರಣಗಳಲ್ಲಿ ಶ್ರೀಗಳು ನಿತ್ಯ ಧರಿಸುತ್ತಿದ್ದ ಸುಮಾರು 1 ಕೆಜಿಯಷ್ಟು ಚಿನ್ನಾಭರಣಗಳೂ ಸೇರಿವೆ ಎನ್ನಲಾಗಿದೆ. ಇದೇ ಆಭರಣಗಳನ್ನು ಪ್ರಸ್ತುತ ಪೊಲೀಸರು ಶಂಕೆ ವ್ಯಕ್ತಪಡಿಸುತ್ತಿರುವ ಶಂಕಿತ ಮಹಿಳೆ ರಮ್ಯಾ ಶೆಟ್ಟಿ ಅವರೂ ಧರಿಸುತ್ತಿದ್ದರು ಎನ್ನಲಾಗಿದೆ. 
SCROLL FOR NEXT