ರಾಜ್ಯ

ಹೆಲ್ಮೆಟ್ ಧರಿಸಿ ಆಭರಣ ಮಳಿಗೆ ನುಗ್ಗಿದ ದುಷ್ಕರ್ಮಿ; ದರೋಡೆಕೋರರನ್ನು ಹಿಮ್ಮೆಟ್ಟಿಸಿದ ಧೀರ ಸಹೋದರಿಯರು

Manjula VN
ಬೆಂಗಳೂರು: ಚಿನ್ನಾಭರಣ ಮಳಿಗೆಗೆ ನುಗ್ಗಿದ್ದ ದುಷ್ಕರ್ಮಿಗಳು ಗುಂಪು ದರೋಡೆಗೆ ವಿಫಲ ಯತ್ನ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 
ಜಯನಗರ ಎರಡನೇ ಬ್ಲಾಕ್'ನ ಅಶೋಕ ಪಿಲ್ಲರ್ ರಸ್ತೆಯಲ್ಲಿ ಮೇ.21 ರಂದು ಘಟನೆ ನಡೆದಿದ್ದು, ಮಳಿಗೆಯ ಮಾಲೀಕ ಸಿ.ವಿ.ರಘು ಅವರು ದೂರು ನೀಡಿದ್ದಾರೆ. 
ರಘು ಅವರು ಕಳೆದ ಒಂದೂವರೆ ವರ್ಷದ ಹಿಂದೆ ಅಶೋಕ ಪಿಲ್ಲರ್ ರಸ್ತೆಯಲ್ಲಿ ಚಾಮುಂಡೇಶ್ವರಿ ಎಂಬ ಹೆಸರಿನ ಚಿನ್ನಾಭರಣ ಮಳಿಗೆಯನ್ನು ಹೊಂದಿದ್ದಾರೆ. ಮಳಿಗೆಯಲ್ಲಿ ಇಬ್ಬರು ಯುವಕರು ಕೆಲಸಕ್ಕೆ ಇದ್ದಾರೆ, 
ಮಳಿಗೆಯ ಪಕ್ಕದಲ್ಲಿಯೇ ರಘು ಅವರ ನಿವಾಸವಿದೆ. ಮೇ.21ರಂದು ರಾತ್ರಿ 8.30ರ ಸುಮಾರಿಗೆ ವ್ಯಕ್ತಿಯೋರ್ವ ಹೆಲ್ಮೆಟ್ ಹಾಗೂ ಶೂ ಧರಿಸಿ ಮಳಿಗೆ ಪ್ರವೇಶ ಮಾಡಲು ಮುಂದಾಗಿದ್ದಾನೆ. ಈ ವೇಳೆ ಶೂ ಹಾಗೂ ಹೆಲ್ಮೆಟ್'ನ್ನು ಹೊರಗೆ ಬಿಟ್ಟು ಬರುವಂತೆ ರಘು ಅವರು ಸೂಚಿಸಿದ್ದಾರೆ. 
ಕೂಡಲೇ ಆತನ ಜೊತೆಗೆ ಹೆಲ್ಮೆಟ್ ಧರಿಸಿದ ಇನ್ನೂ ಐದು ಮಂದಿ ಏಕಾಏಕಿ ಮಾರಾಕಾಸ್ತ್ರಗಳನ್ನು ಹಿಡಿದು ಬಂದಿದ್ದಾರೆ. ದುಷ್ಕರ್ಮಿಗಳನ್ನು ನೋಡಿದ ಮಳಿಗೆಯ ಸಿಬ್ಬಂದಿ ಒಳಗೆ ಓಡಿ ಹೋಗಿದ್ದಾರೆ. ದರೋಡೆಗೆ ಬಂದ ದುಷ್ಕರ್ಮಿಗಳನ್ನು ಹಿಮ್ಮೆಟ್ಟಿಸಲು ಮಾಲೀಕ ರಘು ಅವರು ಜೋರಾಗಿ ಕಳ್ಳ ಎಂದು ಕೂಗಿದ್ದಾರೆ. ಚೀರಾಟದ ಶಬ್ಧ ಕೇಳಿದ ಮಳಿಗೆಯ ಪಕ್ಕದ ಮನೆಯಲ್ಲಿದ್ದ ರಘು ಹಾಗೂ ಇಬ್ಬರು ಹೆಣ್ಣು ಮಕ್ಕಳು ಸ್ಥಳಕ್ಕೆ ಬಂದಿದ್ದಾರೆ. ಈವೇಳೆ ದುಷ್ಕರ್ಮಿಗಳನ್ನು ಹಿಮ್ಮೆಟ್ಟಿಸಿದ್ದಾರೆ. 
ಹೆಣ್ಣುಮಕ್ಕಳ ಕೂಗಾಟವನ್ನು ಕೇಳಿದ ದುಷ್ಕರ್ಮಿಗಳು ಹೆದರಿ ಸ್ಥಳದಿಂದ ಪರಾರಿಯಾಗಿದ್ದಾರೆಂದು ಪೊಲೀಸರು ಹೇಳಿದ್ದಾರೆ. 
ಕೃತ್ಯ ದೃಶ್ಯಾವಳಿಗಳು ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದುಷ್ಕರ್ಮಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ. 
SCROLL FOR NEXT