ಬೆಂಗಳೂರು: ಕಾರ್ಮೆಲಾರಾಮ್ ಲೆವೆಲ್ ಕ್ರಾಸಿಂಗ್ ಗೇಟ್ ಬಳಿ ವಾಹನ ದಾಟಲು ಸವಾರರು ಹೆಚ್ಚು ಹೊತ್ತು ಕಾಯಬೇಕಾಗುತ್ತದೆ, ಇದಕ್ಕೆ ಏನಾದರೊಂದು ಪರಿಹಾರ ಕಂಡುಹಿಡಿಯಿರಿ ಎಂದು ಆರು ವರ್ಷದ ರಿಯಾಂಶಿ ಪಾಟ್ನಾಯಕ್ ಎಂಬ ಬಾಲಕಿ ಮನವಿ ಮಾಡುತ್ತಿರುವ ಆನ್ ಲೈನ್ ವಿಡಿಯೊ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗಿದೆ. ಈಕೆ ದೀಪಾಂಕರ್ ಪಾಟ್ನಾಯಕ್ ಎಂಬುವವರ ಮಗಳಾಗಿದ್ದು ತಮ್ಮ ಮಗಳು ಮಾಡಿಕೊಂಡಿರುವ ಮನವಿಯ ವಿಡಿಯೊ ಮಾಡಿ ಅವರು ಟ್ವೀಟ್ ಮಾಡಿದ್ದರು.
ಕಳೆದ 31ರಂದು ದೀಪಾಂಕರ್ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಮತ್ತು ಸಂಸದ ಪಿ ಸಿ ಮೋಹನ್ ಅವರನ್ನು ಟ್ಯಾಗ್ ಮಾಡಿದ್ದರು.
ಸರ್ಜಾಪುರ ರಸ್ತೆಯಲ್ಲಿರುವ ಸೈಂಟ್ ಪ್ಯಾಟ್ರಿಕ್ಸ್ ಅಕಾಡೆಮಿಯ ಬಾಲಕಿ ಪ್ರಧಾನಿ ನರೇಂದ್ರ ಮೋದಿಯನ್ನುದ್ದೇಶಿಸಿ, ಶಾಲೆಗೆ ಹೋಗುವಾಗ ರೈಲ್ವೆ ಲೆವೆಲ್ಲ್ ಕ್ರಾಸಿಂಗ್ ನಲ್ಲಿ 5 ನಿಮಿಷ ಕಾಯಬೇಕಾಗುತ್ತದೆ. ಇದರಿಂದ ಕೆಲವೊಮ್ಮೆ ಶಾಲೆಗೆ ತಡವಾಗಿ ತಲುಪುತ್ತೇನೆ. ಮನೆಗೆ ಹಿಂತಿರುವಾಗ 15 ಸೆಕೆಂಡ್ಸ್ ಕಾಯಬೇಕಾಗುತ್ತದೆ. ಹೀಗಾಗಿ ಮನೆಗೆ ಬಂದಾಗ ಸುಸ್ತಾಗಿ ಹೋಗುತ್ತದೆ. ಇಲ್ಲಿ ಮೇಲ್ಸೇತುವೆ ಅಥವಾ ಹೊಸ ರಸ್ತೆ ದಯವಿಟ್ಟು ನಿರ್ಮಿಸಿ ಎಂದು ಮನವಿ ಮಾಡಿಕೊಂಡಿದ್ದಾಳೆ.
ತಮ್ಮ ಮಗಳು ಕಡಿಮೆ ಕಾಯುವಿಕೆಯ ಸಮಯ ಹೇಳಿದ್ದು ವಾಸ್ತವವಾಗಿ ಶಾಲೆ, ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ಇದು ಮಕ್ಕಳಿಗೆ ಎಂತಹ ಶಿಕ್ಷೆ ಎಂದು ಕೇಳುತ್ತಾರೆ ಪಾಟ್ನಾಯಕ್.
ರೈಲ್ವೆ ಕ್ರಾಸಿಂಗ್ ವೈ ಇಂಟರ್ ಸೆಕ್ಷನ್ ನಲ್ಲಿದ್ದು ಗುಂಜೂರು-ದೊಡ್ಡಕಾನಹಳ್ಳಿ ರಸ್ತೆಯಾಗಿ ಚಿಕ್ಕ ಬೆಳ್ಳಂದೂರಿಗೆ ಹೋಗುತ್ತದೆ.
ಕರ್ನಾಟಕ ರೈಲು ಬಳಕೆದಾರರ ವೇದಿಕೆ ಇದನ್ನು ರಿಟ್ವೀಟ್ ಮಾಡಿದ್ದು ಇದನ್ನು ಮುಖ್ಯಮಂತ್ರಿ, ವಿಭಾಗೀಯ ರೈಲು ವ್ಯವಸ್ಥಾಪಕರು, ಈಶಾನ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರಿಗೆ ಮುಂದಿನ ಕ್ರಮಕ್ಕಾಗಿ ಒತ್ತಾಯಿಸಿದ್ದಾರೆ.