ಉಡುಪಿ: ಮಾಜಿ ನಕ್ಸಲ್ ನಿಲಗುಳಿ ಪದ್ಮನಾಭ್ ಬಂಧನ
ಉಡುಪಿ: ಮಾಜಿ ನಕ್ಸಲ್ ನಾಯಕ ನಿಲಗುಳಿ ಪದ್ಮನಾಭ್ ಅವರನ್ನು ಕುಂದಾಪುರ ಪೋಲೀಸರು ಬಂಧಿಸಿದ್ದಾರೆ.
2004ರಲ್ಲಿ ಕುಂದಾಪುರ ತಾಲೂಕು ಮಡಾಮಕ್ಕಿಯ ಕಾಂಕ್ರೀಟ್ ಸೇತುವೆ ಜಖಂಗೊಳಿಸಿದ್ದ ಪ್ರಕರಣ ಸಂಬಂಧ ಪದ್ಮನಾಭ್ ಬಂಧನವಾಗಿದೆ.ಪದ್ಮನಾಭ ವಿರುದ್ಧ 2 ಜಾಮೀನು ರಹಿತ ವಾರೆಂಟ್ ಪ್ರಕರಣಗಳು ಮತ್ತು 2 ಲಾಂಗ್ ಪೆಂಡಿಂಗ್ ಪ್ರಕರಣಗಳು ಬಾಕಿ ಉಳಿದಿದ್ದವು ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದ್ದಾರೆ.
ಹಲವು ವರ್ಷಗಳ ಕಾಲ ನಕ್ಸಲ್ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದ ನಿಲಗುಳಿ ಪದ್ಮನಾಭ್ ಅವರನ್ನೊಳಗೊಂಡ ತಂಡ ಕುಂದಾಪುರದ ಮಡಾಮಕ್ಕಿ ಹಂಜಾ ಬಳಿ ಅರಣ್ಯ ಇಲಾಖೆಯ ಕಾಂಕ್ರೀಟ್ ಸೇತುವೆಯನ್ನು ಸೆಪ್ಟೆಂಬರ್ 30, 2004ರಂದು ಜಖಂ ಗೊಳಿಸಿತ್ತು. ಇದಲ್ಲದೆ ಬಳ್ಳಿಮನೆ ಸಮೀಪ ಜೂನ್ 24, 2005ರಂದು ಇನ್ನೂ ಎರಡು ಸೇತುವೆಗಳನ್ನು ಜಖಂ ಗೊಳಿಸಿದ ಆರೋಪ ಇವರ ಮೇಲಿತ್ತು. ಪ್ರಕರಣದ ವಿಚಾರಣೆಗೆ ಹಾಜರಾಗದ ಪದ್ಮನಾಭ್ ಅವರ ಮೇಲೆ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿ ಮಾಡಿತ್ತು.
2016ರಲ್ಲಿ ನಕ್ಸಲ್ ಶರಣಾಗತಿ ಪುನರ್ವಸತಿ ಪ್ಯಾಕೇಜ್ನಡಿ ಮುಖ್ಯವಾಹಿನಿಗೆ ಬಂದಿದ್ದ ಪದ್ಮನಾಭ್ ಉಡುಪಿ ಕೋರ್ಟ್ನಲ್ಲಿ ವಿಚಾರಣೆ ಎದುರಿಸುತ್ತಿದ್ದರು, ಗುರುವಾರ ವಿಚಾರಣೆಗೆ ಹಾಜರಾಗಿ ವಾಪಾಸಾಗುತ್ತಿದ್ದ ಅವರನ್ನು ಕುಂದಾಪುರ ಪೋಲೀಸರು ವಶಕ್ಕೆ ಪಡೆದು ಕುಂದಾಪುರ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ವಾದ ಆಲಿಸಿದ್ದ ನ್ಯಾಯಾಧೀಶ ಶ್ರೀಕಂಠ ಹೆಬ್ಬಾರ್ ನಿಲಗುಳಿ ಪದ್ಮನಾಭ್ ಗೆ 10 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ತೀರ್ಪುನೀಡಿ ಮುಂದಿನ ವಿಚಾರಣೆಯನ್ನು ಜೂನ್ 18ಕ್ಕೆ ಮುಂದೂಡಿದ್ದಾರೆ.
ಈ ನಡುವೆ ಪದ್ಮನಾಭ್ ಬಂಧನವನ್ನು ಅವರ ಪತ್ನಿ ರೇಣುಕಾ ತೀವ್ರವಾಗಿ ಖಂಡಿಸಿದ್ದಾರೆ.ಪದ್ಮನಾಭ್ ಅದಾಗಲೇ ನಕ್ಸಲ್ ಚಟುವಟಿಕೆ ತೊರೆದು ಸಮಾಜದ ಮುಖ್ಯವಾಹಿನಿಗೆ ಬಂದಿದ್ದರೂ ಪೋಲೀಸರು ಅವರಿಗೆ ಕಿರುಕುಳ ನೀಡುತ್ತಿದ್ದಾರೆ.ಇಂದು ಸಹ ಯಾವ ವಾರಂಟ್ ಇಲ್ಲದೆ ಅವರನ್ನು ಬಂಧಿಸಲಾಗಿದೆ ಅವರಿಗೆ ಜಾಮೀನು ಸಿಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics