ಕರ್ನಾಟಕ: ಯೋಧನ ಅಂತ್ಯಸಂಸ್ಕಾರದ ವೇಳೆ ಕೆಲ ಕಾಲ ಪ್ರಕ್ಷುಬ್ಧ ವಾತಾವರಣ
ಧಾರವಾಡ: ಅರುಣಾಚಲ ಪ್ರದೇಶದಲ್ಲಿ ಕೆಲ ದಿನಗಳ ಹಿಂದಷ್ಟೇ ಕುಸಿದು ಬಿದ್ದು ಮೃತಪಟ್ಟಿದ್ದ ಧಾರವಾಡ ಜಿಲ್ಲೆಯ ಮೊರಬ ಗ್ರಾಮದ ಅರ್ಜುನ್ ಅಣ್ಣಿಗೇರಿ (32) ಅವರ ಅಂತಿಮ ಸಂಸ್ಕಾರ ನೆರವೇರಿಸಬೇಕಾದ ಸ್ಥಳದ ಬಗ್ಗೆ ಜಿಲ್ಲಾಡಳಿತ ಶೀಘ್ರ ಮತ್ತು ಸ್ಪಷ್ಟ ನಿರ್ಧಾರ ಕೈಗೊಳ್ಳದ ಕಾರಣ 2 ಗಂಟೆಗಳ ಕಾಲ ಪಾರ್ಥೀವ ಶರೀರವನ್ನು ಬಸ್ ನಿಲ್ದಾಣದಲ್ಲಿ ಇರಿಸಿದ ಘಟನೆ ಬುಧವಾರ ನಡೆದಿದೆ.
ಅಂತಿಮ ಸಂಸ್ಕಾರಕ್ಕೆ ಅಧಿಕಾರಿಗಳು ಸ್ಥಳ ನಿಗದಿ ಮಾಡದ ಹಿನ್ನಲೆಯಲ್ಲಿ ಗ್ರಾಮದಲ್ಲಿ ಕೆಲಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿತ್ತು. ಕೊನೆಗೆ ಎಸ್'ಪಿ ಮಧ್ಯಪ್ರವೇಶಿಸಿ ಉಪ ಪೊಲೀಸ್ ಠಾಣೆ ಆವರಣದಲ್ಲಿ ಅಂತ್ಯ ಸಂಸ್ಕಾರಕ್ಕೆ ಅವಕಾಶ ಮಾಡಿಕೊಟ್ಟು ಗೊಂದಲಕ್ಕೆ ತೆರೆ ಎಳೆದರು.
ಯೋಧ ಅರ್ಜುನ್ ಅವರ ಪಾರ್ಥೀವ ಶರೀರವನ್ನು ಬೆಳಿಗ್ಗೆ 9.30ಕ್ಕೆ ಅಸ್ಸಾಂನಿಂದ ಕರೆತರಲಾಗಿತ್ತು. ಮೆರವಣಿಗೆ, ಸಾರ್ವಜನಿಕ ದರ್ಶನ ಮುಗಿದರೂ ಜಿಲ್ಲಾಡಳಿತ ಮಾತ್ರ ಅಂತ್ಯ ಸಂಸ್ಕಾರ ಎಲ್ಲಿ ನೆರವೇರಿಸಬೇಕು ಎಂಬುದರ ಬಗ್ಗೆ ಸ್ಪಷ್ಟ ನಿಲುವು ಪ್ರಕಟಿಸಿರಲಿಲ್ಲ. ಹೀಗಾಗಿ ತಮ್ಮ ಸ್ವಂತ ಜಮೀನಿನಲ್ಲಿ ಅಂತ್ಯ ಸಂಸ್ಕಾರ ಮಾಡಲು ಮೃತನ ಕುಟುಂಬ ನಿರ್ಧರಿಸಿತು. ಆದರೆ, ಇದಕ್ಕೆ ಗ್ರಾಮಗ ಕೆಲವರು ವಿರೋಧಿಸಿ ಸಾರ್ವಜನಿಕ ಸ್ಥಳ ಅದರಲ್ಲೂ ಬಸ್ ನಿಲ್ದಾಣದಲ್ಲೇ ಅಂತ್ಯ ಸಂಸ್ಕಾರಕ್ಕೆ ಒತ್ತಾಯಿಸಿದರು.
ಆದರೆ, ಇದಕ್ಕೆ ಜಿಲ್ಲಾಡಳಿದ ಒಪ್ಪಲಿಲ್ಲ. ಅಷ್ಟೊತ್ತಿಗಾಗಲೇ ಯೋಧನ ಅಂತಿಮ ಯಾತ್ರೆ ಬಸ್ ನಿಲ್ದಾಣಕ್ಕೆ ಆಗಮಿಸಿತ್ತು. ನಮ್ಮನ್ನು ಬಂಧಿಸಿದರೂ ಬಸ್ ನಿಲ್ದಾಣದಲ್ಲೇ ಮಣ್ಣು ಮಾಡುತ್ತೇವೆಂದು ಮೆರವಣಿಗೆಯಲ್ಲಿದ್ದವರು ಪಟ್ಟು ಹಿಡಿದರು. ಆಗ ಎಸ್'ಪಿ ಸಂಗೀತ ಮಧ್ಯಪ್ರವೇಶಿಸಿ ಪೊಲೀಸ್ ಠಾಣಾ ಆವರಣದಲ್ಲಿಯೇ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡಿದರು.