ಬೆಂಗಳೂರು: ಬೆಂಗಳೂರು-ಕೊಯಮ್ಮತ್ತೂರು ನಡುವಿನ ಡಬಲ್ ಡೆಕ್ಕರ್ ಎಕ್ಸ್ ಪ್ರೆಸ್ ರೈಲಿಗೆ ರಾಜ್ಯ ರೈಲ್ವೆ ಸಚಿವ ರಾಜೇನ್ ಗೋಹೈನ್ ಉದ್ಘಾಟಿಸಿದ್ದು ನಾಳೆ ಮಧ್ಯಾಹ್ನದಿಂದ ರೈಲು ಸಂಚಾರ ಆರಂಭಿಸಲಿದೆ.
ಕೆಎಸ್ಆರ್ ಬೆಂಗಳೂರು-ಕೊಯಮ್ಮತ್ತೂರು ಉದಯ್ ಎಕ್ಸ್ ಪ್ರೆಸ್ ರೈಲು ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣದಿಂದ ಮಧ್ಯಾಹ್ನ 2.15ಕ್ಕೆ ಹೊರಟು ರಾತ್ರಿ 9 ಗಂಟೆಗೆ ಕೊಯಮ್ಮತ್ತೂರಿಗೆ ಸೇರಲಿದೆ. ಸೋಮವಾರ ಬಿಟ್ಟು ಪ್ರತಿದಿನ ರೈಲು ಸಂಚಾರ ನಡೆಸಲಿದೆ.
ಕೊಯಮ್ಮತ್ತೂರಿನಲ್ಲಿ ಇಂದು ಉದ್ಘಾಟನೆಗೊಂಡಿರುವ ಉದಯ್ ಎಕ್ಸ್ ಪ್ರೆಸ್ ರೈಲು ಬೆಳಗ್ಗೆ 10.30ರ ಸುಮಾರಿಗೆ ಕೊಯಮ್ಮತ್ತೂರಿಂದ ಹೊರಟ್ಟಿದ್ದು ಸಂಜೆ 5.20ರ ಸುಮಾರಿಗೆ ಬೆಂಗಳೂರಿಗೆ ಬಂದು ತಲುಪಲಿದೆ. ಈ ರೈಲು ತಿರುಪುರ್, ಇರೋಡ್, ಸೇಲಂ, ಕುಪ್ಪಂ ಮತ್ತು ಕೃಷ್ಣರಾಜಪುರದಲ್ಲಿ ನಿಲ್ಲಲಿದೆ.
ಸೋಮವಾರ ರೈಲು ಸಂಚಾರ ಇಲ್ಲದಿರುವುದರಿಂದ ಜೂನ್ 10ರಿಂದ ರೈಲು ಬೆಳಗ್ಗೆ 5.45ಕ್ಕೆ ಹೊರಡಲಿದ್ದು ಮಧ್ಯಾಹ್ನ 12.40ಕ್ಕೆ ಬೆಂಗಳೂರಿನ ಕೆಎಸ್ಆರ್ ರೈಲು ನಿಲ್ದಾಣಕ್ಕೆ ಬಂದು ತಲುಪಲಿದೆ.