ಕಾಳಾ ಚಿತ್ರ ಪ್ರದರ್ಶನಕ್ಕೆ ಕನ್ನಡಪರ ಹೋರಾಟಗಾರರ ವಿರೋಧ
ಬೆಂಗಳೂರು: ಸೂಪರ್ ಸ್ಚಾರ್ ರಜನಿಕಾಂತ್ ಅಭಿನಯದ ಕಾಳಾ ಚಿತ್ರಕ್ಕೆ ಕನ್ನಡಪರ ಹೋರಾಟಗಾರರ ಪ್ರತಿಭಟನೆ ಬಿಸಿ ಬಲವಾಗಿಯೇ ಮುಟ್ಟಿದೆ.
ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕದ ವಿರುದ್ಧ ಹೇಳಿಕೆ ನೀಡಿ ಕನ್ನಡಪರ ಹೋರಾಟಗಾರರ ಆಕ್ರೋಶಕ್ಕೆ ಗುರಿಯಾಗಿದ್ದ ರಜನಿಕಾಂತ್ ಅವರ ಬಹು ನಿರೀಕ್ಷಿತ ಕಾಳಾ ಚಿತ್ರ ಪೊಲೀಸ್ ಭದ್ರತೆ ನಡುವೆ ಬಿಡುಗಡೆಯಾಯಿತಾದರೂ, ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ಕಾಣಲಿಲ್ಲ. ಕನ್ನಡಪರ ಹೋರಾಟಗಾರರ ಪ್ರತಿಭಟನೆಗೆ ಬಗ್ಗಿದ ರಾಜ್ಯದ ಪ್ರಮುಖ ಮಲ್ಟಿಪ್ಲೆಕ್ಸ್ ಗಳಲ್ಲಿ ಚಿತ್ರ ಪ್ರದರ್ಶನ ಇರಲಿಲ್ಲ. ಇನ್ನು ಸಿಂಗಲ್ ಸ್ಕ್ರೀನ್ ಗಳಲ್ಲಿ ಬೆರಳೆಣಿಕೆಯಷ್ಟು ಮಂದಿರಗಳಲ್ಲಿ ಮಾತ್ರ ಕಾಳಾ ಚಿತ್ರ ಪ್ರದರ್ಶನ ಕಂಡಿತು.
ಬೆಂಗಳೂರಿನ ಮಂತ್ರಿ ಮಾಲ್ ನಲ್ಲಿ ಕಾಳಾ ಚಿತ್ರ ಪ್ರದರ್ಶನಕ್ಕೆ ಸಿದ್ಧತೆಯಾಗಿತ್ತಾದರೂ, ಕನ್ನಡಪರ ಹೋರಾಟಗಾರರು ಅಲ್ಲಿಗೆ ಧಾವಿಸಿ ಪ್ರತಿಭಟನೆ ನಡೆಸಿದ್ದರಿಂದ ಆಡಳಿತ ಸಿಬ್ಬಂದಿ ಚಿತ್ರ ಪ್ರದರ್ಶನ ಸ್ಥಗಿತಗೊಳಿಸಿದರು ಎಂದು ತಿಳಿದುಬಂದಿದೆ. ರಾಜ್ಯದ ಬಹುತೇಕ ಎಲ್ಲ ಚಿತ್ರಮಂದಿರಗಳಲ್ಲೂ ಇದೇ ಪರಿಸ್ಥಿತಿ ಮುಂದುವರೆದಿತ್ತು. ಇನ್ನು ಬಳ್ಳಾರಿಯಲ್ಲಿ ಕಾಳಾ ಚಿತ್ರ ಪ್ರದರ್ಶನವಾಗಿದೆ.
ಇನ್ನು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಕಾಳಾ ಚಿತ್ರ ಪ್ರದರ್ಶನ ಮಾಡಲಾಗುತ್ತಿದ್ದ ಚಿತ್ರ ಮಂದಿರಗಳ ಎದುರು ನೂರಾರು ಕನ್ನಡಪರ ಹೋರಾಟಗಾರರು ಧಾವಿಸಿ ಪ್ರತಿಭಟನೆ ನಡೆಸಿದರು. ಬೆಂಗಳೂರಿನಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಸಂಸ್ಥಾಪಕ ಮತ್ತು ಹೋರಾಟಗಾರ ವಾಟಾಳ್ ನಾಗರಾಜ್ ಮತ್ತು ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾಗೋವಿಂದು ಅವರು ಪ್ರತಿಭಟನೆ ನಡೆಸಿದರು. ಈ ವೇಳೆ ಈ ಇಬ್ಬರು ಮುಖಂಡರನ್ನು ಸೇರಿದಂತೆ ಸುಮಾರು 200ಕ್ಕೂ ಅಧಿಕ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು.
ಮಧ್ಯಾಹ್ನದ ವೇಳೆಗೆ ರಾಜ್ಯಾದ್ಯಂತ ಸುಮಾರು 2 ಸಾವಿರ ಕನ್ನಡಪರ ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದರು. ಸಂಜೆ ಬಿಡುಗಡೆ ಬಳಿಕವೂ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದರು ಎಂದು ತಿಳಿದುಬಂದಿದೆ. ಇನ್ನು ಮೈಸೂರು, ಹುಬ್ಬಳ್ಳಿ, ರಾಯಚೂರು, ಚಿಕ್ಕಬಳ್ಳಾಪುರ, ಆನೇಕಲ್, ಹಾಸನ ಮತ್ತು ದಾವಣಗೆರೆಯಲ್ಲಿ ಕಾಳಾ ಚಿತ್ರ ಪ್ರದರ್ಶನ ಮಾಡುತ್ತಿದ್ದ ಚಿತ್ರ ಮಂದಿರದ ಮೇಲೆ ಕೆಲ ದುಷ್ಕರ್ಮಿಗಳು ದಾಳಿ ಮಾಡಿ ಹಾನಿ ಮಾಡಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು ಅವರು, ಪ್ರತಿಭಟನೆಯ ಹೊರತಾಗಿಯೂ ಚಿತ್ರದ ಹಂಚಿಕೆ ಪಡೆದ ಹಂಚಿಕೆದಾರನ ವಿರುದ್ಧ ವಾಣಿಜ್ಯ ಮಂಡಳಿ ಕ್ರಮಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.