ರಾಜ್ಯ

ಬೆಂಗಳೂರು-ಮೈಸೂರು ನಡುವಿನ 5 ರೈಲುಗಳಲ್ಲಿ ಎಸಿ ಬೋಗಿಗಳ ದರ ಕಡಿತ

Sumana Upadhyaya

ಬೆಂಗಳೂರು: ಬೆಂಗಳೂರು ರೈಲ್ವೆ ವಲಯ ಬೆಂಗಳೂರು-ಮೈಸೂರು ಮಾರ್ಗದ ಮೂಲಕ ಸಂಚರಿಸುವ ಇನ್ನೂ 5 ರೈಲುಗಳಲ್ಲಿ ಎಸಿ ಬೋಗಿಗಳ ದರ ಕಡಿತ ಮಾಡಲು ನಿರ್ಧರಿಸಿದೆ.

19 ತಿಂಗಳ ಹಿಂದೆ ಬೆಂಗಳೂರು-ಮೈಸೂರು ನಡುವೆ 5 ಎಕ್ಸ್ ಪ್ರೆಸ್ ರೈಲುಗಳಲ್ಲಿ ಎಸಿ ಬೋಗಿಗಳ ದರವನ್ನು ಸುಮಾರು ಶೇಕಡಾ 50ರಷ್ಟು ಕಡಿತ ಮಾಡಿದ್ದು ಇದರಿಂದ ಸಂಚಾರಕ್ಕೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ  ಈ ಕ್ರಮ ಕೈಗೊಂಡಿದೆ. ಎರಡು ರೈಲುಗಳಿಗೆ ಮುಂಚಿತವಾಗಿ ಟಿಕೆಟ್ ಬುಕ್ ಮಾಡುವ ವ್ಯವಸ್ಥೆ ಮಾಡಲಾಗಿದೆ.

ಚೆನ್ನೈ ಕೇಂದ್ರ-ಮೈಸೂರು ವಾರದ ರೈಲು ಸಂಖ್ಯೆ 22682, ಜೈಪುರ-ಮೈಸೂರು ಎಕ್ಸ್ ಪ್ರೆಸ್ ರೈಲು ಸಂಖ್ಯೆ 12976, ಮೈಸೂರು-ಚೆನ್ನೈ ಕೇಂದ್ರ ಎಕ್ಸ್ ಪ್ರೆಸ್ ರೈಲು ಸಂಖ್ಯೆ 22681, ಮೈಸೂರು-ಜೈಪುರ ಎಕ್ಸ್ ಪ್ರೆಸ್ ರೈಲು ಸಂಖ್ಯೆ 12975 ಮತ್ತು ಮೈಸೂರು-ಬಿಎಸ್ ಬಿ (ವಾರಣಾಸಿ) ಎಕ್ಸ್ ಪ್ರೆಸ್ ರೈಲುಗಳಲ್ಲಿ ಎಸಿ ಬೋಗಿಗಳ ದರ ಕಡಿತ ಮಾಡಲಾಗಿದೆ.

2016ರ ಅಕ್ಟೋಬರ್ 8ರಂದು ತ್ರಿ ಟಯರ್ ಎಸಿ ಬೋಗಿ ರೈಲಿನ ಒಂದು ಬೋಗಿಯನ್ನು ಎಸಿ ಚೇರ್ ಕಾರ್ ಬೋಗಿಯನ್ನಾಗಿ ಪರಿವರ್ತಿಸಲಾಗಿತ್ತು. ಆರಂಭದಲ್ಲಿ ಬೆಂಗಳೂರು ಮತ್ತು ಮೈಸೂರು ನಡುವೆ 3 ಎಸಿ ಬೋಗಿಯಲ್ಲಿ ಪ್ರಯಾಣಿಸಲು 490 ರೂಪಾಯಿ ನೀಡಬೇಕಾಗಿದ್ದರಿಂದ ರೈಲಿನಲ್ಲಿ ಸೀಟುಗಳು ಭರ್ತಿಯಾಗದೆ ಉಳಿಯುತ್ತಿದ್ದವು. ನಂತರ ಅದನ್ನು ಎಸಿ ಚೇರ್ ಕಾರ್ ಬೋಗಿಯನ್ನಾಗಿ ಪರಿವರ್ತಿಸಿ ಪ್ರಯಾಣ ದರದಲ್ಲಿ ಶೇಕಡಾ 50ರಿಂದ 70ರಷ್ಟು ಕಡಿಮೆ ಮಾಡಲಾಯಿತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ರೈಲ್ವೆ ವಲಯದ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಎನ್ ಆರ್ ಶ್ರೀಧರಮೂರ್ತಿ, ಈ ಬದಲಾವಣೆ ಅತ್ಯಂತ ಯಶಸ್ವಿಯಾಗಿದ್ದು ಪ್ರಯಾಣಿಕರು ಮತ್ತು ರೈಲ್ವೆ ವಲಯಕ್ಕೆ ಅತ್ಯಂತ ಪ್ರಯೋಜನವಾಗಿದೆ ಎಂದು ಹೇಳಿದ್ದಾರೆ.

SCROLL FOR NEXT