ಬೆಂಗಳೂರು: ಫೇಸ್‍ಬುಕ್ ಬಳಕೆ ವಿಚಾರದಲ್ಲಿ ಪತಿ-ಪತ್ನಿ ಜಗಳ, ಪ್ರತ್ಯೇಕ ಕೋಣೆಯಲ್ಲಿ ನೇಣಿಗೆ ಶರಣಾದ ದಂಪತಿ
ಬೆಂಗಳೂರು: ಪತ್ನಿ ಕುಟುಂಬದ ಜವಾಬ್ದಾರಿ ನಿಭಾಯಿಸುವುದಕ್ಕಿಂತ ಹೆಚ್ಚಾಗಿ ಫೇಸ್‍ಬುಕ್ ನಲ್ಲೇ ಕಾಲ ಕಳೆಯುತ್ತಾಳೆ ಎಂಬ ಕಾರಣಕ್ಕೆ ಗಂಡ-ಹೆಂಡತಿ ನಡುವೆ ಉಂಟಾದ ವಾದ, ವಿವಾದವು ಇಬ್ಬರ ಸಾವಿನಲ್ಲಿ ಕೊನೆಯಾದ ಘಟನೆ ಬೆಂಗಳೂರಿನ ಬಾಗಲಗುಂಟೆಯಲ್ಲಿ ನಡೆದಿದೆ.
ಮೂಲತಃ ಕೊಡಗು ಜಿಲ್ಲೆ ಸೋಮವಾರಪೇಟೆಯವರಾದ ಸೌಮ್ಯ ಎಂಎಸ್ (23) ಮತ್ತು ಪತಿ ಅನುಪ್ ವಿ (32) ಮೃತರಾಗಿದ್ದು ಅನೂಪ್ ಪೀಣ್ಯದಲ್ಲಿರುವ ಕೋಳಿಗಳ ಆಹಾರ ತಯಾರಿಕೆ ಘಟಕದಲ್ಲಿ ಕೆಲಸ ಮಾಡುತ್ತಿದ್ದ. ಪತ್ನಿ ಸೌಮ್ಯ ಗೃಹಿಣಿಯಾಗಿದ್ದರು. ಇವರಿಗೆ ಮೂರು ವರ್ಷದ ಮಗನೊಬ್ಬನಿದ್ದಾನೆಂದು ಪೋಲೀಸರು ಮಾಹಿತಿ ನೀಡಿದ್ದಾರೆ.
ಪತ್ನಿ ಹೆಚ್ಚು ಹೆಚ್ಚು ಫೇಸ್‍ಬುಕ್ ಬಳಸುವುದನ್ನು ಕಂಡ ಅನೂಪ್ ಆಕೆಗೆ ಫೇಸ್‍ಬುಕ್ ಬಳಸದಂತೆ ಹೇಳಿದ್ದಾನೆ. ಭಾನುವಾರ ರಾತ್ರಿ, ಸೋಮವಾರ ಬೆಳಿಗ್ಗೆ 5 ಗಂಟೆಗೆ ಸಹ ಪತಿ-ಪತ್ನಿಯರ ನಡುವೆ ಇದೇ ವಿಚಾರದಲ್ಲಿ ಮಾತುಕತೆ ನಡೆದಿದೆ.ಇದಾದ ಬಳಿಕ ಸೌಮ್ಯ ಮಲಗಿದ ಕೋಣೆಗೆ ಹೊರಗಿಂದ ಲಾಕ್ ಮಾಡಿದ ಅನೂಪ್ ತಾನು ಇನ್ನೊಂದು ಕೋಣೆಗೆ ಹೋಗಿ ಮಲಗಿದ್ದಾನೆ.
ಬೆಳಿಗ್ಗೆ 7.30 ಸುಮಾರಿನಲ್ಲಿ ತನ್ನ ಸೋರದ ರವಿಚಂದ್ರನ್ ಗೆ ಕರೆ ಮಾಡಿದ್ದ ಸೌಮ್ಯ ಪತಿ ಅನೂಪ್ ತನ್ನನ್ನು ಕೋಣೆಯಲ್ಲಿ ಕೂಡಿ ಹಾಕಿದ್ದಾಗಿ ದೂರಿತ್ತಿದ್ದಾಳೆ. ತಕ್ಷಣ ಹೊರಟು ಬರುವಂತೆ ಸೋದರನಿಗೆ ಕರೆ ನೀಡಿದ್ದಾಳೆ. ಹೀಗೆ ಸೋದರಿಯ ಕರೆಗೆ ಓಗೊಟ್ಟ ಆತ ಸೋಮವಾರಪೇಟೆಯಿಂದ ಮಧ್ಯಾಹ್ನದ ವೇಳೆ ಬೆಂಗಳೂರು ತಲುಪಿ ಸೌಮ್ಯಳ ಮನೆ ಬಾಗಿಲು ಬಡಿದಿದ್ದಾನೆ. ಆದರೆ ಬಾಗಿಲು ತೆರೆಯದ ಕಾರಣ ನೆರೆಯವರ ಸಹಕಾರ ಪಡೆದು ಬಾಗಿಲು ಒಡೆದು ನೋಡಲಾಗಿ ಮಗು ಹಾರ್ದಿಕ್ ಒಬ್ಬನೇ ಕೋಣೆಯಲ್ಲಿ ಅಳುತ್ತಿದ್ದದ್ದು ಕಂಡಿದೆ. ಅನೂಪ್ ಹಾಗೂ ಸೌಮ್ಯ ಬೇರೆ ಬೇರೆ ಕೋಣೆಗಳಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ಪತ್ತೆಯಾಗಿದೆ.
ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದ್ದು ಬಾಗಲಗುಂಟೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.