ಮಂಗಳೂರು: ಬೆಳ್ತಂಗಡಿ ತಾಲ್ಲೂಕಿನ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಬೃಹತ್ ಪ್ರಮಾಣದಲ್ಲಿ ಗುಡ್ಡ ಕುಸಿದು ನಿನ್ನೆ ರಾತ್ರಿಯಿಂದ ಮಂಗಳೂರು-ಬೆಂಗಳೂರು ನಡುವೆ ವಾಹನ ಸಂಚಾರ ಸ್ಥಗಿತಗೊಂಡಿದ್ದು ಪೊಲೀಸರು ಪ್ರಯಾಣಿಕರ ನೆರವಿಗೆ ಧಾವಿಸಿದ್ದಾರೆ.
ರಸ್ತೆಗೆ ಬಿದ್ದಿರುವ ಕಲ್ಲು ಬಂಡೆಗಳು ಮತ್ತು ಮಣ್ಣನ್ನು ತೆಗೆಯಲು ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯರು ಸತತ ಕಾರ್ಯೋನ್ಮುಖರಾಗಿದ್ದಾರೆ. ರಸ್ತೆ ಬದಿಯಲ್ಲಿ ನೂರಾರು ವಾಹನಗಳು ಚಲಿಸಲಾಗದೆ ನಿಂತಿವೆ. ಕೆಲ ದಿನಗಳಿಂದ ಸತತ ಮಳೆಯಿಂದಾಗಿ ಚಾರ್ಮಾಡಿ ಘಾಟಿಯಲ್ಲಿ ಗುಡ್ಡದಿಂದ ಮಣ್ಣು ಮತ್ತು ಬಂಡೆಗಳು ಕುಸಿದು ಬೀಳುತ್ತಿದ್ದು ಇಂದು ಬೆಳಗ್ಗೆ ಕೂಡ ಎರಡು ಕಡೆಗಳಲ್ಲಿ ಭೂ ಕುಸಿತವಾಗಿದೆ. ಘಾಟಿಯ ಎರಡು ಮತ್ತು ಮೂರನೇ ತಿರುವಿನಲ್ಲಿ ಭೂ ಕುಸಿತದಿಂದಾಗಿ ಸಂಚಾರ ನಿರ್ಬಂಧವಾಗಿದೆ.
ಪ್ರಯಾಣಿಕರಿಗೆ ಬಿಸ್ಕತ್ತು ಮತ್ತು ನೀರನ್ನು ಪೂರೈಸಲಾಗಿದೆ. ಮಕ್ಕಳು, ಹಿರಿಯ ವ್ಯಕ್ತಿಗಳು ಹಸಿವಿನಿಂದ ನರಳುತ್ತಿದ್ದಾರೆ. ರಸ್ತೆಯಿಂದ ಕಲ್ಲು ಮಣ್ಣುಗಳನ್ನು ಆದಷ್ಟು ಶೀಘ್ರವೇ ತೆರವುಗೊಳಿಸುವಲ್ಲಿ ನಿರತರಾಗಿದ್ದೇವೆ ಎಂದು ದಕ್ಷಿಣ ಕನ್ನಡ ಜಿಲ್ಲೆ ಪೊಲೀಸ್ ವರಿಷ್ಠ ರವಿಕಾಂತೇಗೌಡ ತಿಳಿಸಿದ್ದಾರೆ. ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಧಾವಿಸಿ ಕಾರ್ಯನಿರತರಾಗಿದ್ದಾರೆ.
ರಸ್ತೆ ಕಾಮಾರಿ ಹಿನ್ನಲೆಯಲ್ಲಿ ಶಿರಾಡಿ ಘಾಟಿ ಕೂಡ ಸದ್ಯಕ್ಕೆ ಮುಚ್ಚಿರುವುದರಿಂದ ಸಂಚಾರ ದಟ್ಟಣೆ ಅಧಿಕವಾಗಿದೆ. ಚಾರ್ಮಾಡಿ ಘಾಟಿಗೆ ಬದಲು ಬೇರೆ ಮಾರ್ಗವನ್ನು ಮಂಗಳೂರಿನಿಂದ ಬೆಂಗಳೂರಿಗೆ ಹೋಗುವವರು ಬಳಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.