ಬೆಂಗಳೂರು: ಹೊಸದಾಗಿ ನೇಮಕವಾಗಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ್ ಗುಣ ಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಗಮನ ಕೇಂದ್ರೀಕರಿಸುವುದಾಗಿ ಹೇಳಿದ್ದಾರೆ. ಶಿಕ್ಷಣ ಖಾತೆಗಾಗಿ ನಾನು ಸಿಎಂ ಬಳಿ ಮನವಿ ಮಾಡಿದ್ದೆ. ನನಗೆ ಅದೇ ಖಾತೆ ನೀಡಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗಿನ ಸಂದರ್ಶನದಲ್ಲಿ ಮಹೇಶ್ ಹೇಳಿದ್ದಾರೆ.
ಸಚಿವರಾಗಿ ನಿಮ್ಮ ಮೊದಲ ಆದ್ಯತೆ ಏನು?
ಗುಣಮಟ್ಟದ ಶಿಕ್ಷಣಕ್ಕೆ ನನ್ನ ಮೊದಲ ಆದ್ಯತೆ, ಹಲವು ವಿಷಯಗಳಲ್ಲಿ ಬದಲಾವಣೆ ಅಗತ್ಯವಿದೆ. ಇಲಾಖೆಯನ್ನು ಸುಧಾರಿಸಲು ಶ್ರಮಿಸುತ್ತೇನೆ ಎಂದು ಹೇಳಿದ್ದಾರೆ.
ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳನ್ನು ಬದಲಾವಣೆ ಮಾಡುವ ಯೋಜನೆಯಿದೆಯೇ?
ನನಗೆ ಆ ರೀತಿಯ ಯಾವುದೇ ಉದ್ದೇಶಗಳಿಲ್ಲ, ಇರುವ ಅಧಿಕಾರಿಗ ಜೊತೆ ಕೆಲಸ ಮಾಡುತ್ತೇನೆ,ಇಲಾಖೆಯ ಅಭಿವೃದ್ಧಿಗಾಗಿ ಕಠಿಣ ಕೆಲಸ ಮಾಡುತ್ತೇವೆ.
ಹಿಂದಿನ ಸರ್ಕಾರ 1 ರಿಂದ ಪದವಿ ವರೆಗೆ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ಘೋಷಿಸಿತ್ತು, ಅದನ್ನು ಮುಂದುವರಿಸುತ್ತೀರಾ?
ಹೌದು. ಹೆಣ್ಣು ಮಕ್ಕಳಿಗೆ ಪದವಿವರೆಗೂ ಉಚಿತ ಶಿಕ್ಷಣ ಸಿಗಬೇಕು ಎಂಬುದು ನನ್ನ ಬಯಕೆಯಾಗಿದೆ,ಸಿಎಂ ಕೂಡ ಇತ್ತೀಚೆಗೆ ಇದನ್ನೇ ಹೇಳಿದ್ದಾರೆ, ಉಚಿತ ಶಿಕ್ಷಣ ನೀಡುವುದರಿಂದ ಡ್ರಾಪ್ ಔಟ್ ಪ್ರಮಾಣ ಕಡಿಮೆಯಾಗುತ್ತದೆ.
ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಭಾಷೆ ಬೋಧನೆ ಬಗ್ಗೆ ನಿಮ್ಮ ನಿಲುವೇನು?
ಇಂಗ್ಲೀಷ್ ಅನ್ನು ಒಂದು ಭಾಷೆಯಾಗಿ ಬೋಧಿಸಲು ನನ್ನ ಅಭ್ಯಂತರವಿಲ್ಲ, ಆದರೆ ಸರ್ಕಾರಿ ಶಾಲೆಗಳಲ್ಲಿ ಅದನ್ನು ಮಾಧ್ಯಮವಾಗಿ ಬೋಧಿಸಬೇಕೆ ಎಂಬುದರ ಬಗ್ಗೆ ನಾನಿನ್ನೂ ಯೋಚಿಸಿಲ್ಲ.
ಖಾಲಿ ಇರುವ ಶಿಕ್ಷಕರ ಹುದ್ದೆ ತುಂಬು ಬಗ್ಗೆ ಏನು ನಿರ್ಧಾರ ಕೈಗೊಳ್ಳುತ್ತೀರಿ?
ಸದ್ಯ ನೀತಿ ಸಂಹಿತೆ ಜಾರಿಯಲ್ಲಿದೆ, ಜೂನ್ 16ರ ನಂತರ 10ಸಾವಿರ ಶಿಕ್ಷಕರ ನೇಮಕಕ್ಕೆ ಆದೇಶ ಹೊರಡಿಸಲಾಗುವುದು. ಸುಮಾರು 22 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿಯಿವೆ ಎಂಬುದು ನನ್ನ ಗಮನಕ್ಕೆ ಬಂದಿದೆ, ಎಷ್ಟು ಸಾಧ್ಯವೋ ಅಷ್ಟು ಬೇಗ ಹುದ್ದೆಗಳನ್ನು ತುಂಬಲು ಪ್ರಯತ್ನಿಸುತ್ತೇವೆ,. ತಾತ್ಕಾಲಿಕವಾಗಿ 15 ಸಾವಿರ ಅತಿಥಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುತ್ತೇವೆ.