ಬೆಂಗಳೂರು: ಪೊಲೀಸ್ ಕಸ್ಟಡಿಯಲ್ಲಿ ತಮ್ಮನ್ನು ಹೀನಾಯವಾಗಿ ಪರಿಗಣಿಸಲಾಗುತ್ತಿದೆ ಎಂದು ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಾಲ್ವರು ಆರೋಪಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಆರೋಪಿಗಳಿಗೆ ಉತ್ತಮ ಆರೋಗ್ಯ ಕಲ್ಪಿಸುವ ರಕ್ಷಣೆ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ.
ವ್ಯಾಪಾರಿಗಳಾಗಿರುವ ಶಿಕಾರಿಪುರ ತಾಲ್ಲೂಕಿನ ಕುಪ್ಪನಹಳ್ಳಿಯ ಸುಜಿತ್ ಕುಮಾರ್, ವಿಜಯಪುರ ಜಿಲ್ಲೆಯ ರತನ್ ಪುರದ ಮನೋಹರ್ ಯಡವೆ, ಪುಣೆಯ ಚಿಂಚವಾಡದಲ್ಲಿ ಎಂಜಿನಿಯರ್ ಆಗಿದ್ದ ಅಮೊಲ್ ಕಾಲೆ ಮತ್ತು ಮಹಾರಾಷ್ಟ್ರದ ಸಿಂದುದುರ್ಗದ ಸಾಮಾಜಿಕ ಕಾರ್ಯಕರ್ತ ರಾಮಚಂದ್ರ ದೆಗ್ವೆಕರ್ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ಹಿಂದೂ ಕಾರ್ಯಕರ್ತರಾಗಿದ್ದ ಈ ನಾಲ್ವರು ಆರೋಪಿಗಳನ್ನು ಗೌರಿ ಲಂಕೇಶ್ ಹತ್ಯೆ ಕೇಸಿನಲ್ಲಿ 2,3,4 ಮತ್ತು 6ನೇ ಆರೋಪಿಗಳೆಂದು ಗುರುತಿಸಲಾಗಿದೆ. ಈ ಆರೋಪಿಗಳಿಗೆ ತಕ್ಷಣವೇ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಬೇಕೆಂದು ಸರ್ಕಾರಕ್ಕೆ ಆದೇಶ ನೀಡಿ ನ್ಯಾಯಮೂರ್ತಿ ಕೆ ಎನ್ ಫಣೀಂದ್ರ ವಿಚಾರಣೆಯನ್ನು ಇದೇ 18ಕ್ಕೆ ಮುಂದೂಡಿದರು.