ರಾಜ್ಯ

8 ವರ್ಷಗಳ ನಂತರ 'ಬಸ್ ದಿನ' ಸ್ಥಗಿತ: ಸಾರ್ವಜನಿಕ ಸಲಹೆ ಕೋರಿಕೆ

Sumana Upadhyaya

ಬೆಂಗಳೂರು: ಪ್ರಯಾಣಿಕರು ಖಾಸಗಿ ವಾಹನಗಳನ್ನು ಬಿಟ್ಟು ಸಾರ್ವಜನಿಕ ವಲಯ ಸಂಪರ್ಕವಾದ ಸರ್ಕಾರಿ ಬಸ್ಸನ್ನು ಹೆಚ್ಚೆಚ್ಚು ಬಳಸುವಂತೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) 8 ವರ್ಷಗಳ ಹಿಂದೆ ಬಸ್ ದಿನವನ್ನು ಆರಂಭಿಸಿತ್ತು. 2010ರಲ್ಲಿ ಆರಂಭಗೊಂಡ ಈ ಕಾರ್ಯಕ್ರಮದಂತೆ ಪ್ರತಿ ತಿಂಗಳು 4ನೇ ತಾರೀಖಿನಂದು ಬಸ್ ದಿನವನ್ನು ಆಚರಿಸುವುದಾಗಿದೆ.

ಆದರೆ ಕಳೆದೆರಡು ತಿಂಗಳಿನಿಂದ ಬಿಎಂಟಿಸಿ ಬಸ್ ದಿನವನ್ನು ಆಚರಿಸಿಲ್ಲ. ಕಳೆದ 8 ವರ್ಷಗಳಲ್ಲಿ ಬಸ್ ದಿನ ಆಚರಿಸದೆ ಬಾಕಿಯಾದದ್ದು ಇದೇ ಮೊದಲ ಸಲ. ಕಳೆದ ತಿಂಗಳು ರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಆಚರಿಸದಿದ್ದ ಬಿಎಂಟಿಸಿ ಈ ತಿಂಗಳು ಕೂಡ ತಪ್ಪಿಸಿಕೊಂಡಿದೆ.

ಕಳೆದ ಕೆಲ ದಿನಗಳಲ್ಲಿ ಬಸ್ ದಿನ ಪ್ರಯಾಣಿಕರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಹೀಗಾಗಿ ಇಡೀ ವ್ಯವಸ್ಥೆಯನ್ನು ಮರುಜಾರಿಗೊಳಿಸಬೇಕಿದೆ. ಇದನ್ನು ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೆ ತರಲು ಕೆಲವು ಸಂಸ್ಥೆಗಳಿಗೆ ವಹಿಸುವುದು ಸೂಕ್ತವೆಂದು ಅನಿಸುತ್ತದೆ ಎನ್ನುತ್ತಾರೆ ಬಿಎಂಟಿಸಿ ಅಧಿಕಾರಿಯೊಬ್ಬರು.

2012ರಲ್ಲಿ ಬಸ್ ದಿನಾಚರಣೆಯಂದು ಬಿಎಂಟಿಸಿಯಲ್ಲಿ ಪ್ರಯಾಣ ಮಾಡಿದವರ ಸಂಖ್ಯೆ ಶೇಕಡಾ 10ರಷ್ಟು ಏರಿಕೆಯಾಗಿತ್ತು. ಅಲ್ಲದೆ ನಗರದ ಸಂಚಾರ ದಟ್ಟಣೆ ಮತ್ತು ವಾಯುಮಾಲಿನ್ಯ ಮಟ್ಟ ಕೂಡ ಆ ದಿನಗಳಲ್ಲಿ ಕಡಿಮೆಯಾಗಿತ್ತು. ಇಂತಹ ಉತ್ತಮ ಕಾರ್ಯಕ್ರಮ ವಿಫಲವಾಗದಂತೆ ನೋಡಿಕೊಳ್ಳುವುದು ಒಳ್ಳೆಯದು ಎಂದು ಅಧಿಕಾರಿಗಳು ಹೇಳುತ್ತಾರೆ.

ಬೆಂಗಳೂರಿನಲ್ಲಿ ಬಸ್ ದಿನವನ್ನು ಹೇಗೆ ಪರಿಣಾಮಕಾರಿಯಾಗಿ ಜಾರಿಗೆ ತರಬಹುದು ಎಂಬುದರ ಬಗ್ಗೆ ಸಾರ್ವಜನಿಕರು ctmo@mybmtc.comಗೆ ಕಳುಹಿಸಬಹುದು.

SCROLL FOR NEXT