ರಾಜ್ಯ

ಗೌರಿ ಲಂಕೇಶ್ ಹತ್ಯೆ ಕೇಸು: ಬಂಧನದಿಂದ ಆಘಾತಕ್ಕೊಳಗಾಗಿರುವ ವಾಗ್ಮರೆ ಕುಟುಂಬ

Sumana Upadhyaya

ವಿಜಯಪುರ: ಆತ ಒಂದು ದಿನಕ್ಕಿಂತ ಜಾಸ್ತಿ ಮನೆ ಬಿಟ್ಟು ಎಲ್ಲಿಗೂ ಹೋಗುತ್ತಿರಲಿಲ್ಲ. ಆತ ಯಾವಾಗಲೂ ತನ್ನ ಪೋಷಕರ ಜೊತೆಯೇ ಇರುತ್ತಿದ್ದ. ಅವರನ್ನು ನೋಡಿಕೊಳ್ಳುವುದು ಮತ್ತು ಇಡೀ ದಿನ ಹೊಟ್ಟೆಪಾಡಿಗಾಗಿ ಕೆಲಸ ಮಾಡುತ್ತಿದ್ದ. ಆತ ಮುಗ್ಧ. ಆತನಿಗೆ ಮಹಾರಾಷ್ಟ್ರ ಮತ್ತು ಬೇರೆ ಯಾವುದೇ ರಾಜ್ಯದ ಜನರೊಂದಿಗೆ ಸಂಪರ್ಕವಿಲ್ಲ ಎಂದು ಗೌರಿ ಲಂಕೇಶ್ ಹತ್ಯೆಯ ಪ್ರಮುಖ ಆರೋಪಿ ಪರಶುರಾಮ ವಾಗ್ಮರೆಯ ಸಂಬಂಧಿಕರೊಬ್ಬರು ಹೇಳುತ್ತಾರೆ.

ವಾಗ್ಮರೆಯ ಬಂಧನದ ನಂತರ ಆತನ ಕುಟುಂಬವರ್ಗ ಆಘಾತಕ್ಕೊಳಗಾಗಿದೆ. ಪರಶುರಾಮ ಕೆಲಸ ಮಾಡುತ್ತಿರುವ ಅಂಗಡಿ ಮಾಲಿಕ ಅಶೋಕ್ ಕಾಂಬ್ಲೆ ಗೌರಿ ಲಂಕೇಶ್ ಹತ್ಯೆಯಾದ ದಿನ ವಾಗ್ಮರೆ ಅಂಗಡಿಯಲ್ಲಿ ಕೆಲಸ ಮಾಡಿ ಮನೆಗೆ ಹೋಗಿದ್ದಾನೆ. ಸೆಪ್ಟೆಂಬರ್ ತಿಂಗಳಲ್ಲಿ ಅವನು ರಜೆ ತೆಗೆದುಕೊಂಡಿರಲಿಲ್ಲ. ಗುರುವಾರ ಆತ ರಜೆ ತೆಗೆದುಕೊಳ್ಳುತ್ತಿದ್ದ, ಅಂದು ನಮ್ಮ ಅಂಗಡಿಗೆ ರಜೆ ದಿನ. ಆತ ಮುಗ್ಧನಾಗಿದ್ದು, ತತ್ವಶಾಸ್ತ್ರ, ಧಾರ್ಮಕತೆ ಕಡೆಗೆ ಹೆಚ್ಚು ಆಕರ್ಷಿತನಾಗಿದ್ದ. ಪ್ರತಿನಿತ್ಯ ಯೋಗ ಮಾಡುತ್ತಿದ್ದ ಎನ್ನುತ್ತಾರೆ.

ಕಳೆದ ಭಾನುವಾರ ಪರಶುರಾಮ ಬಂಧನವಾದ ನಂತರ ಆತನ ಮನೆಯ ಸುತ್ತಮುತ್ತಲ ಪಾತ್ರೆ ಅಂಗಡಿಯವರೆಲ್ಲ ತಮ್ಮ ಅಂಗಡಿಗಳನ್ನು ಮುಚ್ಚಿ ಆತನ ಪೋಷಕರಾದ ಜಾನಕಿ ಮತ್ತು ಅಶೋಕ್ ವಾಗ್ಮರೆಯನ್ನು ಸಮಾಧಾನಪಡಿಸುವಲ್ಲಿ ನಿರತರಾಗಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಪರಶುರಾಮನ ತಾಯಿ ಜಾನಕಿ ಅನಾರೋಗ್ಯಕ್ಕೀಡಾಗಿದ್ದು ಆಹಾರವನ್ನು ಕೂಡ ಸೇವಿಸುತ್ತಿಲ್ಲ. ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದ ಜಾನಕಿಯನ್ನು ಸಂಜೆ ಬಿಡುಗಡೆ ಮಾಡಲಾಯಿತು.

ಮಾಧ್ಯಮದವರೊಂದಿಗೆ ಮಾತನಾಡಿದ ಜಾನಕಿ, ನನ್ನ ಮಗ ಅಮಾಯಕ. ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಪೊಲೀಸರು ಅವನನ್ನು ಬಂಧಿಸಿದ್ದಾರೆ. ನಮ್ಮ ಹೆಸರು ಕೆಡಿಸಲು ಮತ್ತು ಆತನ ಭವಿಷ್ಯವನ್ನು ಹಾಳು ಮಾಡಲು ಮಾಡಿರುವ ಕುತಂತ್ರವಿದು ಎನ್ನುತ್ತಾರೆ.

ಸದ್ಯದಲ್ಲಿಯೇ ಮಗ ಮನೆಗೆ ಹಿಂತಿರುಗಿ ಬಾರದಿದ್ದರೆ ಆತ್ಮಹತ್ಯೆ ಕೂಡ ಮಾಡುವುದಾಗಿ ಜಾನಕಿ ಬೆದರಿಕೆಯೊಡ್ಡಿದ್ದಾರೆ. ನಾವು ಕುಟುಂಬದ ಆದಾಯಕ್ಕೆ ಆತನನ್ನು ನಂಬಿಕೊಂಡು ಬದುಕುತ್ತಿದ್ದೇವೆ. ಕಳೆದೊಂದು ವರ್ಷದಿಂದ ಅವನು ಎಲ್ಲಿಗೂ ಹೋಗಿರಲಿಲ್ಲ. ಮಹಾರಾಷ್ಟ್ರದಲ್ಲಿ ಅಥವಾ ಬೇರಾವುದೇ ರಾಜ್ಯದಲ್ಲಿ ಅವನಿಗೆ ಯಾರೊಂದಿಗೆ ಕೂಡ ಸಂಪರ್ಕವಿಲ್ಲ. ಶ್ರೀರಾಮ ಸೇನೆಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ ಎಂದು ಜಾನಕಿ ಹೇಳುತ್ತಾರೆ.

SCROLL FOR NEXT