ಗೌರಿ ಲಂಕೇಶ್ ಹತ್ಯೆ: ಎಸ್ಐಟಿಯಿಂದ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷರ ವಿಚಾರಣೆ 
ರಾಜ್ಯ

ಗೌರಿ ಲಂಕೇಶ್ ಹತ್ಯೆ: ಎಸ್ಐಟಿಯಿಂದ ಶ್ರೀ ರಾಮ ಸೇನೆ ವಿಜಯಪುರ ಜಿಲ್ಲಾಧ್ಯಕ್ಷನ ವಿಚಾರಣೆ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಸಿರುವ ವಿಶೇಷ ತನಿಖಾ ತಂಡ ವಿಜಯಪುರ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ...

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಸಿರುವ  ವಿಶೇಷ ತನಿಖಾ ತಂಡ ವಿಜಯಪುರ ಶ್ರೀ ರಾಮ ಸೇನೆ ಜಿಲ್ಲಾಧ್ಯಕ್ಷ ರಾಕೇಶ್‌ ಮಠ ಅವರನ್ನು ವಿಚಾರಣೆ ನಡೆಸಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗೌರಿ ಲಂಕೇಶ್ ಹತ್ಯೆ ಮಾಡಿದ್ದ ಆರೋಪಿ ಪರಶುರಾಮ್ ವಾಗ್ಮೋರೆ ಓರ್ವ ಹಿಂದುತ್ವವಾದಿ ಎನ್ನಲಾಗಿದ್ದು ಈತನ ಸಂಬಂಧ ಮಠ ಅವರನ್ನು ಪ್ರಶ್ನಿಸಲು ಎಸ್ಐಟಿ ನಿರ್ಧರಿಸಿದೆ ಎಂದು ಅಧಿಕೃತ ವಕ್ತಾರರು ಪಿಟಿಐಗೆ ತಿಳಿಸಿದ್ದಾರೆ.
ಪತ್ರಕರ್ತೆ ಹತ್ಯೆ ಆರೋಪಿ ವಾಗ್ಮೋರೆ ಕುಟುಂಬದ ಸದಸ್ಯರಿಗೆ ಹಣಕಾಸು ನೆರವು ನೀಡುವಂತೆ ರಾಕೇಶ್‌ ಮಠ ಸಾಮಾಜಿಕ ತಾಣ ಫೇಸ್‌ಬುಕ್‌ನಲ್ಲಿ ಮನವಿ ಮಾಡಿದ್ದರು.
ಇದೀಗ ರಾಕೇಶ್ ಪರಶುರಾಮ್ ಅವರಿಗೆ ಲಂಕೇಶ್ ಹತ್ಯೆಗೆ ಸಹಕಾರ ನೀಡಿದ್ದಾರೆ ಎನ್ನುವ ಕುರಿತು ಎಸ್ಐಟಿ ತನಿಖೆ ಪ್ರಾರಂಭಿಸಿದೆ.
ಜನವರಿ 2012 ರಲ್ಲಿ ವಿಜಯಪುರ ಜಿಲ್ಲೆಯ ಸಿಂಧಗಿಯಲ್ಲಿ ತಹಶೀಲ್ದಾರ್ ಕಚೇರಿಯ ಹೊರಗೆ ಅಕ್ರಮವಾಗಿ ಪಾಕಿಸ್ತಾನಿ ಧ್ವಜವನ್ನು ಹಾರಿಸಿದ್ದ ಪ್ರಕರಣದಲ್ಲಿ ಪರಶುರಾಮ್ ವಾಗ್ಮೋರೆ ಮತ್ತು  ರಾಕೇಶ್‌ ಮಠ ಆರೋಪಿಗಳಾಗಿದ್ದಾರೆ. ಮಠ ಅವರಿಗೆ  ಉತ್ತರ ಕರ್ನಾಟಕದ ಭಾಗಗಳು ಸೇರಿ ಕರಾವಳಿ ಪ್ರದೇಶಗಳಲ್ಲಿ ಬಲವಾದ ಬೆಂಬಲವಿದೆ ಎಂದು ಎಸ್ಐಟಿ  ನಂಬಿದೆ.
"ರಾಕೇಶ್ ಮಠ ಅವರಿಗೆ ನಾವು ಸಮನ್ಸ್ ನೀಡಿದ್ದೇವೆ, ಅವರಿನ್ನೂ ವಿಚಾರಣೆಗೆ ಹಾಜರಾಗಿಲ್ಲ" ಅಧಿಕೃತ ವಕ್ತಾರರು ಹೇಳಿದ್ದಾರೆ.
ಶ್ರೀ ರಾಮ ಸೇನೆ ಸಂಸ್ಥಾಪಕ ಮತ್ತು ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಈ ಹತ್ಯೆ ಪ್ರಕರಣದಿಂದ ದೂರ ಉಳಿದಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ 5 ರಂದು ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿನ ತಮ್ಮ ನಿವಾಸದಲ್ಲಿ ಗೌರಿ ಲಂಕೇಶ್ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದರು.
"ಶ್ರೀ ರಾಮ ಸೇನೆ ಹಾಗೂ ವಾಗ್ಮೋರೆ ನಡುವೆ ಯಾವುದೇ ಸಂಬಂಧವಿಲ್ಲ, ಅವರು ನಮ್ಮ ಸಂಘಟನೆಗೆ ಸೇರಿಲ್ಲ. ನಮ್ಮ ಕಾರ್ಯಕರ್ತರಲ್ಲ. ನಾನಿದನ್ನು ಸ್ಪಷ್ಟವಾಗಿ ಹೇಳುತ್ತೇನೆ" ಮುತಾಲಿಕ್ ಹೇಳಿದರು.
ಇದೇ ಮುತಾಲಿಕ್ ಹಿಂದೆ ಪಾಕಿಸ್ತಾನ ಧ್ವಜ ಪ್ರಕರಣ ಬೆಳಕಿಗೆ ಬಂದಾಗ ವಾಗ್ಮೋರೆ ನಮ್ಮ ಸಂಘಟನೆಯ ಸದಸ್ಯ ಎಂದಿದ್ದರು. ಆದರೆ ಮತ್ತೆ ಹೇಳಿಕೆಯನ್ನು ಬದಲಿಸಿದ ಅವರು ವಾಗ್ಮೋರೆ ಶ್ರೀರಾಮ ಸೇನೆಯ ಸದಸ್ಯರಲ್ಲ ಅವರು ಆರ್ ಎಸ್ ಎಸ್ ಸಂಘಟನೆಗೆ ಸೇರಿದ್ದಾರೆ ಎಂದಿದ್ದರು.
ಇದೀಗ ರಾಕೇಶ್ ಮಠ ಕುರಿತಂತೆ ಪ್ರತಿಕ್ರಯಿಸಿರುವ ಮುತಾಲಿಕ್, ಅವರು ನಮ್ಮ ಸಂಘಟನೆಯ ಜಿಲ್ಲಾ ಮುಖ್ಯಸ್ಥರಾಗಿದ್ದಾರೆ. ಗೌರಿ ಲಂಕೇಶ್ ಹತ್ಯೆ ಸಂಬಂಧ ಅವರನ್ನು ವಿಚಾರಣೆಗೆ ಕರೆದಿದ್ದಾರೆ. ಏಕೆಂದರೆ ಅವರೆಲ್ಲರೂ ಸಿಂಧಗಿ ಪಟ್ಟಣಕ್ಕೆ ಸೇರಿದ್ದವರು. ಪಾಕಿಸ್ತಾನಿ ಧ್ವಜ ವಿವಾದದಲ್ಲಿ ಒಟ್ಟಿಗೆ ಇದ್ದವರು ಎಂದರು.
ಸಿಂಧಗಿಯಿಂದ ಬೆಂಗಳೂರಿಗೆ ಬಂದಿರುವ ಪರಶುರಾಮ ವಾಗ್ಮೋರೆ ತಂದೆ ಅಶೋಕ್ ವಾಗ್ಮೋರೆ ತನ್ನ ಮಗ ಅಮಾಯಕ ಎಂದಿದ್ದಾರೆ. ಗೌರಿ ಹತ್ಯೆಯಾದ ದಿನ ಪರಶುರಾಮ ವಾಗ್ಮೋರೆ ಎಲ್ಲಿದ್ದರೆನ್ನುವುದನ್ನು ಹೇಳಲು ಅವರ ತಂದೆ ವಿಫಲರಾಗಿದ್ದು "ಅವರು ಮನೆಯಲ್ಲಿದ್ದರು ಎಂದು ನಾನು ಭಾವಿಸುತ್ತೇನೆ" ಎಂದಿದ್ದಾರೆ.
"ಲಂಕೇಶ್ ಹತ್ಯೆಗೆ ಸಂಬಂಧಿಸಿ ತನಿಖೆಗೆ ಆಗಮಿಸಬೇಕೆಂದು ನೋಟೀಸ್ ಬಂದ ಹಿನ್ನೆಲೆಯಲ್ಲಿ ನಾನು ಬೆಂಗಳೂರಿಗೆ ಬಂದಿದ್ದೇನೆ." ರಾಕೇಶ್ ಹೇಳಿದ್ದಾರೆ.
"ಪರಶುರಾಮ ಹಾಗೂ ತಾನು ಸ್ನೇಹಿತರು. ಅವರ ಬಂಧನವು ಆಘಾತಕಾರಿಯಾಗಿದೆ  ಪೊಲೀಸರು ಪರಶುರಾಮ ವಾಗ್ಮೋರೆ ಬಂಧಿಸಿದ ಬಳಿಕ ನನಗೆ ವಿಚಾರ ತಿಳಿಯಿತು. ಅವನು ನಿರಪರಾಧಿಯಾಗಿ ಹೊರಬರುತ್ತಾನೆ ಎಂದು ವಿಶ್ವಾಸವಿದೆ" ರಾಕೇಶ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT