ಬೆಂಗಳೂರು: "ಬೆಂಗಳೂರು ಭಾರತದ ವಿಜ್ಞಾನದ ರಾಜಧಾನಿ, ಬೆಂಗಳೂರು ಐಟಿ ಸಿಟಿ ಎಂದು ಎಲ್ಲರೂ ಹೇಳುತ್ತಾರೆ.ಚುನಾವಣೆಯಲ್ಲಿ ಸಹ ರಾಜಕಾರಣಿಗಳು ಐಟಿ ಸಿಟಿ ಎನ್ನುತ್ತಾರೆ ಹೊರತು ವಿಜ್ಞಾನದ ರಾಜಧಾನಿ ಎನ್ನುವುದನ್ನು ಯಾರೂ ಹೇಳಲ್ಲ. ಏಕೆಂದರೆ ಐಟಿಯಲ್ಲಿ ದುಡ್ಡಿದೆ" ಭಾರತ ರತ್ನ ಪ್ರೊ.ಸಿ.ಎನ್.ಆರ್.ರಾವ್ ಹೇಳಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ 'ಮನೆಯಂಗಳದಲ್ಲಿ ಮಾತುಕತೆ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
"ಭಾರತ ಮುಂದುವರಿದ ರಾಷ್ಟ್ರವಾಗಬೇಕಾದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಬೆಳವಣಿಗೆಯಾಗಬೇಕು. ಚೀನಾ ಅಮೆರಿಕಾವನ್ನು ಹಿಂದಿಕ್ಕಲು ಯೋಚಿಸುತ್ತಿದೆ, ನಾವೇಕೆ ಯೋಚಿಸಬಾರದು? ಭಾರತಕ್ಕೆ ಸ್ವಾತಂತ್ರ ಬಂದು ಇಷ್ಟು ವರ್ಷ ಕಳೆದರೂ ವಿಜ್ಞಾನ, ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಒತ್ತು ನೀಡುತ್ತಿಲ್ಲ. ಸರ್ಕಾರ ಈ ವಲಯಕ್ಕೆ ಶೇ 0.9ರಷ್ಟು ಮಾತ್ರ ಹಣ ಮೀಸಲಾಗಿರಿಸುತ್ತದೆ ಎಂದರೆ ಅದು ಒಂದು ಶೇ. ಗೂ ಕಡಿಮೆ. ಇದರಲ್ಲಿ ಬಾಹ್ಯಾಕಾಶ, ಅಣುವಿಜ್ಞಾನ ವಲಯವೇ ಬಹುಪಾಲು ಹಣ ಪಡೆಯುತ್ತದೆ.ಭೌತವಿಜ್ಞಾನ, ರಸಾಯನಶಾಸ್ತ್ರ ಹಾಗೂ ಜೀವ ವಿಜ್ಞಾನ ಕ್ಷೇತ್ರಗಳಿಗೆ ಏನೂ ಸಿಗುತ್ತಿಲ್ಲ" ರಾವ್ ಬೇಸರ ವ್ಯಕ್ತಪಡಿಸಿದ್ದಾರೆ.
ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಸಂವಾದ ಕಾರ್ಯಕ್ರಮ ನಡೆದಿದ್ದು ಸಾರ್ವಜನಿಕರ ಪ್ರಶ್ನೆಗೆ ಸಿ.ಎನ್.ಆರ್.ರಾವ್ ತಾಳ್ಮೆಯಿಂದ ಉತ್ತರಿಸಿದ್ದಾರೆ. ಅವರ ಮಾತುಗಳ ಪ್ರಮುಖ ಸಾಲುಗಳು ಹೀಗಿದೆ-
ಪ್ರಪಂಚದಲ್ಲಿ ಬೇಕಾದಷ್ಟು ವಿಜ್ಞಾನಿಗಳಿದ್ದಾರೆ. ಆದರೆ, ಎಲ್ಲರೂ ಗಮನಿಸುವಂಥ ಕೆಲಸ ಮಾಡಲು ಎಲ್ಲರಿಂದ ಸಾಧ್ಯವಾಗಲ್ಲ.ನನಗೆ ವಿಜ್ಞಾನ ಬಿಟ್ಟು ಬೇರೇನೂ ಮಾಡಲು ಬರುವುದಿಲ್ಲ. ಅಮ್ಮ ಹೇಳುತ್ತಿದ್ದರು ‘ಲಕ್ಷ್ಮಿ ಬೇಕಾದರೆ ನಮಸ್ಕಾರ ಮಾಡಿದರೆ ನಿನಗೆ ದುಡ್ಡು ಕೊಟ್ಟುಬಿಡ್ತಾಳೆ. ಸರಸ್ವತಿಯನ್ನು ಮೆಚ್ಚಿಸಲು ಬಹಳ ಕಷ್ಟ.’ ಎಲ್ಲರೂ ದುಡ್ಡು ಬೇಕೆನ್ನುತ್ತಾರೆ, ಆದರೆ ಹಣ ಇಟ್ಟುಕೊಂಡು ಏನು ಂಆಡುವುದಕ್ಕಾಗತ್ತೆ?
ನಾನು ಕಾಲೇಜು ಇಂಟರ್‌ಮಿಡಿಯಟ್ ಇದ್ದಾಗ ಸ್ವಾತಂತ್ರ ಬಂದಿತ್ತು. ಭಾರತದ ಸ್ವಾತಂತ್ರ್ಯ ಬಹಳ ಮುಖ್ಯವಾದದ್ದು. ಆಗ ಬೆಂಗಳೂರಿನಲ್ಲಿ ಎಲ್ಲಿಯೂ ಸರಿಯಾಗಿ ರೇಷನ್ ಸಿಗುತ್ತಿರಲಿಲ್ಲ ಆಗೆಲ್ಲಾ ಸೈನ್ಸ್, ಇಂಜಿನಿಯರಿಂಗ್ ಕಾಲೇಜುಗಳು ಬಹಳ ಕಡಿಮೆ ಇತ್ತು. ಈಗ 3000 ಕಾಲೇಜುಗಳಿವೆ!
ನನ್ನ ಮೊದಲ ಪುಸ್ತಕ ಬಂದಾಗ ನನಗೆ 24 ವರ್ಷ. ನನ್ನ ಎರಡನೇ ಪುಸ್ತಕ 29ನೇ ವರ್ಷಕ್ಕೆ ಪ್ರಕಟಿಸಿದ್ದೆ.ಪುಸ್ತಕ ಓದಿದ್ದ ಸಿ.ವಿ.ರಾಮನ್ ನನ್ನನ್ನು ಅಕಾಡೆಮಿ ಸದಸ್ಯನಾಗಿ ಮಾಡಿದ್ದರು.
ದುಡ್ಡಿನಿಂದ ಎಲ್ಲವೂ ಸಿಕ್ಕಲ್ಲ. ವಿಜ್ಞಾನ, ಸಾಹಿತ್ಯ, ಬೇರೆ ಯಾವುದರಲ್ಲಿಯೇ ಆಗಲಿ. ಒಒಂದೊಂದೇ ಆಸಕ್ತಿ ಇರಬೇಕು. ಆಗಲೇ ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ
ಭಾರತ ಚೀನಾದ ರೀತಿ ಮುಂದೆ ಬರದಿದ್ದರೆ ಭವಿಷ್ಯದಲ್ಲಿ ಬಹಳ ಕಷ್ಟವಾಗಲಿದೆ. ಜಾಗತಿಕವಾಗಿ ಸಾಕಷ್ಟು ಪೈಪೋಟಿ ಇದೆ.ಕೊರಿಯಾ ಜಪಾನ್ ಅನ್ನು ಹಿಂದಿಕ್ಕಿ ಮುಂದೆ ಸಾಗುತ್ತಿದೆ.
ನಾನು 67 ವರ್ಷದಿಂದ ಸಂಶೋಧನೆ ಮಾಡುತ್ತಿದ್ದೇನೆ, ಇನ್ನು ಸಾಯುವವರೆಗೂ ಮುಂದುವರಿಸುತ್ತೇನೆ.ಬಿಸ್ಮಿಲ್ಲಾ ಖಾನ್, ‘ನಾನು ಸಾಯುವವರೆಗೂ ಸಂಗೀತದಲ್ಲಿ ಇರಬೇಕು’ ಅಂತ ಕೇಳಿಕೊಳ್ಳುತ್ತಿದ್ದರು. ಹಾಗೆ ನಾನು ಸಹ ವಿಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಅಂದುಕೊಂಡಿದ್ದೇನೆ.
ನನ್ನನ್ನು ಬುದ್ಧಿವಂತ ಅಂದುಕೊಳ್ಳುವುದು ಬೇಡ.ನನ್ನ ಕೆಲಸಗಳನ್ನು ನಾನು ಶ್ರದ್ಧೆಯಿಂದ ಮಾಡುತ್ತಿದ್ದೇನೆ.ಪ್ರಶಸ್ತಿ ಸಿಕ್ಕಲೆಂದು ಣಾನು ಕೆಲಸ ಮಾಡುವುದಿಲ್ಲ. ಅವು ತಾನಾಗಿಯೇ ಬರುತ್ವೆ. ನಾನು ಯಾವತ್ತೂ ಇಂತಹಾ ಪ್ರಶಸ್ತಿ ನೀಡಿ ಎಂದು ಕೇಳಿಲ್ಲ.
ಹಳ್ಳಿಗಳಲ್ಲಿ ಬುದ್ಧಿವಂತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರಲ್ಲಿ ನ್ಯೂಟನ್, ಐನ್‌ಸ್ಟೈನ್, ಫ್ಯಾರಡೆಯನ್ನು ಹುಡುಕಬೇಕಿದೆ. ಇಂಜಿನಿಯರಿಂಗ್ ಮಾಡಿ ಕೆಲಸವಿಲ್ಲದ ಸಾವಿರಾರು ಯುವಕರು ಬೆಂಗಳೂರಿನಲ್ಲಿ ಸಿಗುತ್ತಾರೆ. ಮಕ್ಕಳಿಗೆ ಯಾವುದು ಇಷ್ಟವೋ ಅದನ್ನೇ ಓದಲು ಪೋಷಕರು ಅವಕಾಶ ಒದಗಿಸಬೇಕು.
ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ವಿಜ್ಞಾನ ಕ್ಷೇತ್ರಕ್ಕೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ.
ವಿಜ್ಞಾನ ಅಂದರೆ ಬದಲಾವಣೆ, ಹೊಸತನ. ಈ ಬದಲಾವಣೆಯನ್ನು ಮೊದಲು ಶಿಕ್ಷಕರು ಗುರುತಿಸಿ ಅರಿಯಬೇಕು.ಅದನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕು. ಹೊಸತನ್ನು ತಿಳಿದುಕೊಳ್ಳಲು ಶಿಕ್ಷಕರು ಸದಾ ಸಿದ್ದರಿರಬೇಕು. ನಮ್ಮಲ್ಲಿ ವಿದ್ಯಾರ್ಥಿಗಳು ಉತ್ತಮವಾಗಿದ್ದಾರೆ. ಆದರೆ ಶಿಕ್ಷಕರು ಇನ್ನಷ್ಟು ಶ್ರಮಿಸಬೇಕು.
ವಾತಾವರಣದ ಬದಲಾವಣೆಯನ್ನು ನಾವು ಅರ್ಥ ಮಾಡಿಕೊಳ್ಳುತ್ತಿಲ್ಲ. ಬೆಂಗಳೂರಿನಲ್ಲಿ ಇಂದು ಒಳ್ಳೆ ಗಾಳಿಗೆ ಪರದಾಡಬೇಕಾಗಿದೆ. ಇದಕ್ಕೆ ಇಲ್ಲಿನ ಕಾರುಗಳು ಕಾರಂಅ. ಕಾರಿನಿಂದ ಹೊರಸೂಸುವಷ್ಟು ಕೆಟ್ಟ ಅನಿಲಗಳು ಇನ್ನೆಲ್ಲಿಂದ ಸಹ ಬಿಡುಗಡೆಯಾಗುವುದಿಲ್ಲ. ಜಲಜನಕದ ಕಾರು, ತಯಾರಿಸುವ ಕುರಿತು ನಾನು ಸಂಶೋಧನೆ ನಡೆಸುತ್ತಿದ್ದೇನೆ. ಜಲಜನಕದಿಂದ ಓಡುವ ಕಾರು, ಟ್ರೇನುಗಳು ಬಂದರೆ ವಾತಾವರಣ ಸುಧಾರಣೆ ಆಗಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos