ರಾಜ್ಯ

ಗೌರಿ ಲಂಕೇಶ್ ಹತ್ಯೆ: ಮಂಪರು ಪರೀಕ್ಷೆಗೆ ಒಪ್ಪಿದ ಆರೋಪಿ ನವೀನ್

Lingaraj Badiger
ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಆರೋಪಿ ಕೆ.ಟಿ.ನವೀನ್‌ ಕುಮಾರ್ ಅಲಿಯಾಸ್ ಹೊಟ್ಟೆ ಮಂಜ ಮಂಪರು ಪರೀಕ್ಷೆಗೆ ಒಪ್ಪಿಕೊಂಡಿದ್ದಾನೆ ಎಂದು ಆರೋಪಿ ಪರ ವಕೀಲರು ಬುಧವಾರ ಹೇಳಿದ್ದಾರೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ತಾನು ಭಾಗಿಯಾಗಿಲ್ಲ ಎಂಬುದನ್ನು ಸಾಬೀತುಪಡಿಸುವುದಕ್ಕಾಗಿ ತನ್ನ ಕಕ್ಷಿದಾರ ಮಂಪರು ಪರೀಕ್ಷೆಗೆ ಒಳಪಡಲು ಒಪ್ಪಿಕೊಂಡಿದ್ದಾರೆ ಎಂದು ಆರೋಪಿ ಪರ ವಕೀಲ ವೇದಮೂರ್ತಿ ಅವರು ಪಿಟಿಐಗೆ ತಿಳಿಸಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್ ಐಟಿ) ಆರೋಪಿಯನ್ನು ಇದುವರೆಗೂ ಯಾವುದೇ ಪರೀಕ್ಷೆಗೆ ಒಳಪಡಿಸಿಲ್ಲ ಎಂದು ವೇದಮೂರ್ತಿ ಅವರು ನಿನ್ನೆ ಕೋರ್ಟ್ ನಲ್ಲಿ ದೂರಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು ನವೀನ್ ಕುಮಾರ್ ಮಂಪರು ಪರೀಕ್ಷೆಗೆ ಒಳಪಡಲು ಸಿದ್ಧರಿದ್ದಾರೆಯೇ ಎಂದು ಪ್ರಶ್ನಿಸಿತ್ತು.
ಮಂಪರು ಪರೀಕ್ಷೆಗೆ ನವೀನ್ ಕುಮಾರ್ ಒಪ್ಪಿಕೊಂಡಿದ್ದು, ಆರೋಪಿ ಪರ ವಕೀಲರ ಸಮಕ್ಷಮದಲ್ಲಿ ಅಹಮದಾಬಾದ್ ನಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಮಂಪರು ಪರೀಕ್ಷೆ ನಡೆಯಲಿದೆ.
ಫೆ. 16ರಂದು ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ನವೀನ್‌ನನ್ನು ವಶಕ್ಕೆ ಪಡೆದಿದ್ದ ಸಿಸಿಬಿ ಪೊಲೀಸರು, ನಾಡ ಪಿಸ್ತೂಲ್ ಹಾಗೂ ‘ಪಾಯಿಂಟ್ 32’ ರಿವಾಲ್ವರ್‌ನ ಐದು ಗುಂಡುಗಳನ್ನು ಜಪ್ತಿ ಮಾಡಿದ್ದರು. ಗೌರಿ ಹತ್ಯೆಯಲ್ಲೂ ಕೈವಾಡವಿರಬಹುದು ಎಂಬ ಅನುಮಾನದಡಿ ಎಸ್‌ಐಟಿ ಅಧಿಕಾರಿಗಳು ಆತನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದರು.
SCROLL FOR NEXT