ರಾಜ್ಯ

ರಾಗಿ ಮುದ್ದೆ, ನಾಟಿ ಕೋಳಿ ಸಾರು ತಿನ್ನಿ: ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆಯಿರಿ

Sumana Upadhyaya

ಮೈಸೂರು: ಸಾಮಾನ್ಯವಾಗಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಇಲ್ಲವೇ ಬೇರೆ ವಸ್ತುಗಳ ಬಹುಮಾನ ನೀಡುವುದು ಸಾಮಾನ್ಯ. ಆದರೆ ಇಲ್ಲಿ ಸಿನಿಮಾದಲ್ಲಿ ನಟಿಸಲು ಕೂಡ ಅವಕಾಶವಿದೆ. ಹೌದು, ಮಂಡ್ಯ ಮೂಲದ 'ನೆಲದಾನಿ ಬಳಗ' ರಾಗಿ ಮುದ್ದೆ ಮತ್ತು ನಾಟಿ ಕೋಳಿ ಸಾರು ತಿನ್ನುವ ಸ್ಪರ್ಧೆಯನ್ನು ನಾಳೆ ಭಾನುವಾರ ಏರ್ಪಡಿಸಿದೆ.

ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು 150ಕ್ಕೂ ಹೆಚ್ಚು ಮಂದಿ ಸ್ಪರ್ಧೆಯಲ್ಲಿ ಭಾಗವಹಿಸಲು ಹೆಸರು ನೋಂದಾಯಿಸಿಕೊಂಡಿದ್ದಾರೆ. ಮಂಡ್ಯ ತಾಲ್ಲೂಕಿನ ಮಂಗಳ ಗ್ರಾಮದ ಮಾರಮ್ಮ ದೇವಸ್ಥಾನದ ಮುಂದೆ ನಾಳೆ ಈ ಸ್ಪರ್ಧೆ ನಡೆಯಲಿದೆ.

ಕಾರ್ಯಕ್ರಮದ ಸಂಘಟಕ ಲಂಕೇಶ್ ಮಾತನಾಡಿ, ಈ ವರ್ಷ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ಮಾತ್ರವಲ್ಲದೆ ಆನೆಬಾಲ ಎಂಬ ಕನ್ನಡ ಸಿನಿಮಾದಲ್ಲಿ ನಟಿಸುವ ಅವಕಾಶ ಕೂಡ ಸಿಗಲಿದೆ. ಸಾಂಪ್ರದಾಯಿಕ ಸ್ಪರ್ಧೆಗಳಲ್ಲಿ ಭಾಗವಹಿಸುವವರನ್ನು ಪ್ರೋತ್ಸಾಹಿಸಲು ಚಿತ್ರದ ನಿರ್ಮಾಪಕರು ಸಿನಿಮಾದಲ್ಲಿ ನಟಿಸುವ ಅವಕಾಶ ನೀಡುವುದಾಗಿ ನಮಗೆ ಭರವಸೆ ಕೊಟ್ಟಿದ್ದಾರೆ ಎಂದು ಹೇಳಿದರು.

ಸ್ಪರ್ಧಿಗಳ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸಂಘಟಕರು 50 ಕೆಜಿ ನಾಟಿ ಕೋಳಿ ಸಾರು  ಮತ್ತು 250 ಗ್ರಾಂ ತೂಕವುಳ್ಳ ರಾಗಿ ಮುದ್ದೆಯನ್ನು ತಯಾರಿಸಲು ನಿರ್ಧರಿಸಿದ್ದಾರೆ.

ಸ್ಪರ್ಧಿಗಳಿಗೆ ನಾಟಿ ಕೋಳಿ ಸಾರು ಮತ್ತು ರಾಗಿ ಮುದ್ದೆ ತಿನ್ನಲು ನೀಡಲಾಗುತ್ತದೆ. ಯಾರು ಅತಿ ಹೆಚ್ಚು ರಾಗಿ ಮುದ್ದೆ ಮತ್ತು ನಾಟಿ ಕೋಳಿ ಸಾರು ತಿನ್ನುತ್ತಾರೋ ಅವರಿಗೆ 5 ಸಾವಿರ ರೂಪಾಯಿ ನಗದು ಬಹುಮಾನ ಮತ್ತು ಟ್ರೋಫಿ ನೀಡಲಾಗುತ್ತದೆ. ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದವರಿಗೆ ತಲಾ 3 ಸಾವಿರ ರೂ ಮತ್ತು 2 ಸಾವಿರ ರೂಪಾಯಿ ನೀಡಲಾಗುತ್ತದೆ.

ಇದಲ್ಲದೆ ಮತ್ತಿಬ್ಬರು ಸಮಾಧಾನಕರ ಬಹುಮಾನ ಪಡೆಯಲಿದ್ದಾರೆ. ಅವರಿಗೆ ತಲಾ 1 ಸಾವಿರ ರೂಪಾಯಿ ನೀಡಲಾಗುತ್ತದೆ. ಪ್ರತಿ ಸ್ಪರ್ಧಿಗೆ 100 ರೂಪಾಯಿ ಪ್ರವೇಶ ಶುಲ್ಕವಿದೆ.
ಸಾಂಪ್ರದಾಯಿಕ ಪಂದ್ಯಗಳು ಮತ್ತು ಸ್ಥಳೀಯ ಸಂಸ್ಕೃತಿ ಇತ್ತೀಚಿನ ದಿನಗಳಲ್ಲಿ ಕಣ್ಮರೆಯಾಗುತ್ತಿವೆ. ಅಂತಹ ಆಟಗಳನ್ನು ಮರು ಜ್ಞಾಪಿಸಿಕೊಳ್ಳಲು ನಾನು ಈ ಆಲೋಚನೆ ಮಾಡಿದೆ ಎನ್ನುತ್ತಾರೆ ಲಂಕೇಶ್. ಕಳೆದ ವರ್ಷದ ಸ್ಪರ್ಧೆಯಲ್ಲಿ ಒಬ್ಬರು 3 ಕೆ ಜಿ ರಾಗಿ ಮುದ್ದೆ ತಿಂದಿದ್ದರು ಎನ್ನುತ್ತಾರೆ.

SCROLL FOR NEXT