ರಾಜ್ಯ

ಸ್ಥಳದ ಅಭಾವ: ಮತ್ತೆರಡು ಜೈಲು ನಿರ್ಮಾಣಕ್ಕೆ ಸರ್ಕಾರಕ್ಕೆ ಚಿಂತನೆ

Manjula VN
ಬೆಂಗಳೂರು: ರಾಜ್ಯ ಕಾರಾಗೃಹಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಕೈದಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸ್ಥಳದ ಅಭಾವ ಎದುರಾಗಿದ್ದು, ಈ ಹಿನ್ನಲೆಯಲ್ಲಿ ಮತ್ತೆರಡು ಜೈಲು ನಿರ್ಮಾಣಕ್ಕೆ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. 
ರಾಜ್ಯದ ಕೇಂದ್ರೀಯ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ, ಅಪರಾಧಿಗಳು ಹಾಗೂ ಮಹಿಳಾ ಕೈದಿಗಳು ಸೇರಿ ಒಟ್ಟು 3,226 ಕೈದಿಗಳನ್ನು ಇರಿಸುವ ಸಾಮರ್ಥ್ಯವನ್ನು ಹೊಂದಿದ್ದು, ಈ ಜೈಲಿನಲ್ಲಿ ಪ್ರಸ್ತುತ 4,650 ಕೈದಿಗಳನ್ನು ಇರಿಸಲಾಗಿದೆ. 
ಕೆಲ ದಿನಗಳ ಹಿಂದಷ್ಟೇ ಕರ್ನಾಟಕ ಹೈಕೋರ್ಟ್ ಕೂಡ ಕಾರಾಗೃಹಗಳಲ್ಲಿ ನಿಗದಿತ ಪ್ರಮಾಣಕ್ಕಿಂತಲೂ ಕೈದಿಗಳು ಹೆಚ್ಚಾಗಿರುವ ಮತ್ತು ಸಿಬ್ಬಂದಿಗಳ ಕೊರತೆಯಿರುವ ವಿಚಾರ ಸಂಬಂಧ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ದಾಖಲಾಗಿತ್ತು. ಸುಪ್ರೀಂಕೋರ್ಟ್ ನಿರ್ದೇಶನದ ಮೇಲೆ ಸ್ವಯಂ ಪ್ರೇರಿತ ಅರ್ಜಿ ದಾಖಲಾಗಿತ್ತು. 
ಕೇಂದ್ರೀಯ, ಜಿಲ್ಲಾ ಮತ್ತು ತಾಲೂಕು ಗಳು ಎಲ್ಲಾ ಸೇರಿ ರಾಜ್ಯದಲ್ಲಿ 100ಕ್ಕೂ ಹೆಚ್ಚು ಕಾರಾಗೃಹಗಳಿವೆ. ನಿಗದಿಗಿಂತಲೂ ಈ ಜೈಲುಗಳಲ್ಲಿ ಶೇ.50 ರಿಂದ 150ರಷ್ಟು ಕೈದಿಗಳಿದ್ದಾರೆ. 
ಬಂಧಿಖಾನೆ ಇಲಾಖೆಯ ಎಡಿಜಿಪಿ ಎನ್.ಎಸ್. ಮೇಘರಿಕ್ ಅವರು ಮಾತನಾಡಿ, ಬೆಂಗಳೂರು ಮತ್ತು ಮಂಗಳೂರಿನಲ್ಲಿ 2 ಜೈಲುಗಳನ್ನು ಸ್ಥಾಪನೆ ಮಾಡುವಂತೆ ರಾಜ್ಯ ಸರ್ಕಾರ ಈಗಾಗಲೇ ನಿರ್ಧಾರ ಕೈಗೊಂಡಿದ್ದು, ಜೈಲು ನಿರ್ಮಾಣಕ್ಕೆ ಯೋಜನೆಗಳು ಸಿದ್ಧಗೊಳ್ಳುತ್ತಿವೆ. ಪ್ರತೀ ಕಾರಾಗೃಹಕ್ಕೂ 10 ಎಕರೆ ಭೂಮಿ ಬೇಕಿದೆ. ಕಾರಾಗೃಹ ನಿರ್ಮಾಣಕ್ಕೆ ಭೂಮಿ ದೊರಕಿದ್ದು, ಒಮ್ಮೆ ಜೈಲು ಸ್ಥಾಪನೆಗೊಂಡ ಬಳಿಕ ಎಲ್ಲಾ ಸಮಸ್ಯೆಗಳು ದೂರಾಗಲಿದೆ ಎಂದು ಹೇಳಿದ್ದಾರೆ. 
ಕಾರಾಗೃಹ ಇಲಾಖೆ ಈಗಾಗಲೇ 1,070 ವಾರ್ಡೆನ್ ಗಳು ಮತ್ತು 32 ಜೈಲರ್ ಗಳನ್ನು ನೇಮಕ ಮಾಡಿಕೊಂಡಿದೆ. ಹಲವು ವಿಭಾಗಗಳಲ್ಲಿ ಈಗಾಗಲೇ 2,100ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆಂದು ತಿಳಿಸಿದ್ದಾರೆ. 
ವಿದೇಶಿ ಮಾದರಿ ಶೈಲಿಗಳನ್ನು ಅಳವಡಿಸಿಕೊಳ್ಳುವ ಬದಲಾಗಿ ಸ್ಥಳೀಯ ಅಗತ್ಯತೆಗಳಿಗೆ ತಕ್ಕಂತೆ ಜೈಲು ನಿರ್ಮಾಣ ಮಾಡಲು ಗೃಹ ಇಲಾಖೆ ಮೂಲಗಳು ಮಾಹಿತಿ ನೀಡಿವೆ. 
ಸ್ಥಳದ ಅಭಾವದಿಂದಾಗಿ ಮಂಗಳೂರು ಜೈಲಿನಿಂದ ಹಲವು ಕೈದಿಗಳನ್ನು ಬೆಳಗಾವಿ ಜೈಲಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಕೈದಿಗಳನ್ನು ಸ್ಥಳಾಂತರ ಮಾಡಿದರೂ ಕೂಡ ಜೈಲಿಗಳಲ್ಲಿ ನಿಗದಿಗಿಂತಲೂ ಹೆಚ್ಚು ಕೈದಿಗಳಿದ್ದಾರೆ. ನೂತನ ಜೈಲು ನಿರ್ಮಾಣಗೊಂಡ ಬಳಿಕ ಸ್ಥಳಾಂತರಗೊಂಡ ಕೈದಿಗಳನ್ನು ಮರಳಿ ಕಾರಾಗೃಹಗಳಿಗೆ ಕರೆ ತರಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. 
ಅಪರಾಧಿಗಳಿಗೂ ಮೂಲಭೂತ ಹಕ್ಕುಗಳಿವೆ. ದೇಶದಲ್ಲಿರುವ ಹಲವು ಜೈಲಿಗಳಲ್ಲಿ ವಿಚಾರಣಾಧೀನ ಕೈದಿಗಳ ಸಂಖ್ಯೆಯೇ ಹೆಚ್ಚಾಗಿವೆ. ಹಲವು ಜೈಲುಗಳಲ್ಲಿ ವಿಚಾರಧೀನ ಕೈದಿಗಳಾಗಿಯೇ ಹಲವರು ಜೈಲುಗಳಲ್ಲಿ ಹಲವು ವರ್ಷಗಳಿಂದಲೂ ಇದ್ದಾರೆಂದು ಹಿರಿಯ ವಕೀಲ ಎಂ.ಟಿ ನಾನಯ್ಯ ಅವರು ಹೇಳಿದ್ದಾರೆ. 
SCROLL FOR NEXT