ಮಂಗಳೂರು: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್ ರಸ್ತೆ ಜುಲೈ 1ರಂದು ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇತ್ತು. ಆದರೆ ಮೂರನೇ ಬಾರಿ ಜನರ ನಿರೀಕ್ಷೆ ಸುಳ್ಳಾಗಿದ್ದು, ಮತ್ತೆ 15 ದಿನ ಮುಂದಕ್ಕೆ ಹೋಗಿದೆ.
ಇಂದು ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ನಡೆದ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪಿಡಬ್ಲ್ಯೂಡಿ ಕಾರ್ಯನಿರ್ವಾಹಕ ಇಂಜಿನಿಯರ(ರಾಷ್ಟ್ರೀಯ ಹೆದ್ದಾರಿ ವಿಭಾಗ) ರಮೇಶ್ ಅವರು, ಮೂರು ಚಿಕ್ಕ ಸೇತುವೆಗಳ ಕಾಮಗಾರಿ ಇನ್ನೂ ನಡೆಯುತ್ತಿದೆ. ಕಳೆದ ಮೇ ತಿಂಗಳಿನಲ್ಲಿ ಭಾರಿ ಮಳೆಯಿಂದಾಗಿ ಕಾಮಗಾರಿ ವಿಳಂಬವಾಗಿದೆ. ಈಗ ಮಳೆ ಕಡಿಮೆಯಾಗಿದ್ದು, ಮುಂದಿನ 15 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತದೆ ಎಂದರು,
ಜುಲೈ 15ರ ಹೊತ್ತಿಗೆ 12.30 ಕಿ.ಮೀ. ರಸ್ತೆ ಸಂಚಾರಕ್ಕೆ ಸಿದ್ಧವಾಗಲಿದೆ ಎಂದು ಅವರು ಹೇಳಿದ್ದಾರೆ. ಆದರೆ ಅಧಿಕಾರಿಗಳು ಕಾಮಗಾರಿ ಪೂರ್ಣಗೊಳಿಸಲು ನೀಡುತ್ತಿರುವ ಮೂರನೇ ಗಡುವು ಇದಾಗಿದೆ.
ಈ ಮುಂಚೆ ಮೇ ಕೊನೆಯಲ್ಲಿ ಪೂರ್ಣಗೊಳ್ಳಲಿದೆ ಎಂದಿದ್ದರು. ಬಳಿಕ ಜುಲೈ 1ರಂದು ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಹೇಳಿದ್ದರು. ಜುಲೈ 15 ಎಂದು ಹೇಳುತ್ತಿದ್ದಾರೆ.
ಶಿರಾಡಿ ಘಾಟ್ ನ 12.38 ಕಿ.ಮೀ ಉದ್ದದ ರಸ್ತೆಯನ್ನು 74 ಕೋಟಿ ರುಪಾಯಿ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಆದ್ದರಿಂದ ಜನವರಿಯಿಂದ ವಾಹನ ಸಂಚಾರವನ್ನು ಬಂದ್ ಮಾಡಲಾಗಿದೆ.