ರಾಜ್ಯ

ತುಮಕೂರಿನ ಈ ಗ್ರಾಮ ಈಗ ಬಯಲು ಶೌಚ ಮುಕ್ತ, ಇದಕ್ಕೆ ಕಾರಣ ಓರ್ವ ಮಹಿಳೆ!

Sumana Upadhyaya

ಬೆಂಗಳೂರು: ಬೆಂಗಳೂರು ನಗರದಿಂದ ತುಮಕೂರು ಕಡೆಗೆ ಎರಡು ಗಂಟೆ ಪ್ರಯಾಣ ಮಾಡಿದರೆ ಸಿರಾ ತಾಲ್ಲೂಕಿನಲ್ಲಿರುವ ತಡಕಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ದಿಬ್ಬಡಹಟ್ಟಿ ಎಂಬ ಊರು ಸಿಗುತ್ತದೆ. ಇಲ್ಲಿ ಒಟ್ಟು 63 ಮನೆಗಳಿವೆ. ಆರು ತಿಂಗಳ ಹಿಂದೆ ಇಲ್ಲಿ ಕೇವಲ 12 ಮನೆಗಳಲ್ಲಿ ಶೌಚಾಲಯ ಮತ್ತು ಬಾತ್ ರೂಂ ವ್ಯವಸ್ಥೆಯಿತ್ತು. ಗ್ರಾಮಸ್ಥರು ಬಯಲಿನಲ್ಲಿ ಶೌಚ ಮಾಡಬೇಕಾಗುತ್ತಿತ್ತು. ಮತ್ತು ಛಾವಣಿಯಿಲ್ಲದ ಶೆಡ್ ನಲ್ಲಿ ಸ್ನಾನ ಮಾಡಬೇಕಾಗುತ್ತಿತ್ತು. ಇಂದು ಈ ಗ್ರಾಮದ ಎಲ್ಲಾ ಮನೆಗಳಲ್ಲಿ ಶೌಚಾಲಯವಿದೆ ಮತ್ತು ಬಾತ್ ರೂಂ ವ್ಯವಸ್ಥೆಯಿದೆ ಅದಕ್ಕೆ ಕಾರಣ ಸಾಮಾಜಿಕ ಕಾರ್ಯಕರ್ತೆ ಭವ್ಯರಾಣಿ.

ಒಂದು ವರ್ಷದ ಹಿಂದೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಒಂದು ವರದಿ ಮಾಡಿತ್ತು, ಭವ್ಯರಾಣಿ ತನ್ನ 23ನೇ ವಯಸ್ಸಿನಲ್ಲಿ ಗ್ರಾಮದಲ್ಲಿ ಶೌಚಾಲಯ ಕಟ್ಟಿಸಲೆಂದು ಉದ್ಯೋಗವನ್ನು ತೊರೆದಿದ್ದರು. ತನ್ನ ಗುರಿಯನ್ನು ಸಾಧಿಸಿದ ಭವ್ಯರಾಣಿ ಇದುವರೆಗೆ 400ಕ್ಕೂ ಅಧಿಕ ಶೌಚಾಲಯ ಕಟ್ಟಿಸಿದ್ದಾರೆ. ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿಯನ್ನು ಓದಿದ ಮುನಿಸ್ವಾಮಪ್ಪ ಟ್ರಸ್ಟ್ ನ್ನು ನಡೆಸುತ್ತಿರುವ ದೊಡ್ಡಣ್ಣ ಮತ್ತು ವಿನತಾ ರೆಡ್ಡಿ ಇವರಿಗೆ ಒಟ್ಟು 9 ಲಕ್ಷ ರೂಪಾಯಿ ನೆರವು ನೀಡಿದರು.

ಈ ಹಣವನ್ನು ಬಳಸಿ ಭವ್ಯರಾಣಿ ದಿಬ್ಬಡಹಟ್ಟಿಯಲ್ಲಿ ಶೌಚಾಲಯ ಮತ್ತು ಬಾತ್ ರೂಂಗಳನ್ನು ಕಟ್ಟಿಸಿದ್ದಾರೆ. ಇದೀಗ ಗ್ರಾಮವಿಡೀ ಬಯಲು ಶೌಚಮುಕ್ತವಾಗಿದೆ.
ದೊಡ್ಡಣ್ಣ ಅವರು ಇದೇ ಗ್ರಾಮದವರಾಗಿದ್ದು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ತಮ್ಮ ಗ್ರಾಮದಲ್ಲಿ ಶೌಚಾಲಯ ಕಟ್ಟಿಸಬೇಕೆಂದು ನನ್ನ ಬಳಿ ಕೇಳಿಕೊಂಡರು, ಅದಕ್ಕೆ ನಾನು ಕೂಡ ಸಂತೋಷದಿಂದ ಒಪ್ಪಿಕೊಂಡೆ ಎನ್ನುತ್ತಾರೆ ಭವ್ಯರಾಣಿ.

ಗ್ರಾಮಕ್ಕೆ ಹೋಗಿ ನೋಡಿದಾಗ ಮಹಿಳೆಯರು ತೆಂಗಿನ ಗರಿಯ ಶೆಡ್ ನೊಳಗೆ ಸ್ನಾನ ಮಾಡುವುದು ಕಂಡೆನು. ಹೆಣ್ಣು ಮಕ್ಕಳು ಋತುಮತಿಯಾದ ಸಂದರ್ಭದಲ್ಲಿ ಮೂಢನಂಬಿಕೆಯಿಂದ ಗ್ರಾಮದಿಂದ ಹೊರಗಿಡುತ್ತಿದ್ದರು. ಇಡೀ ಗ್ರಾಮಸ್ಥರು ಹೀಗೆಯೇ ಬದುಕಿತ್ತಿದ್ದಾರೆ ಎಂದು ತಿಳಿಯಿತು. ಇಲ್ಲಿನ ಮಹಿಳೆಯರು ವಾರಕ್ಕೆ ಮೂರು ಸಲ ಮಾತ್ರ ಸ್ನಾನ ಮಾಡುತ್ತಿದ್ದರು. ಅದು ರಾತ್ರಿಯಾದ ಬಳಿಕ. ನಸುಕಿನಲ್ಲಿಯೇ ಎದ್ದು ಬಹಿರ್ದೆಸೆಗೆ ಹೋಗಬೇಕಾಗುತ್ತಿತ್ತು. ಋತುಮತಿಯಾದ ಹೆಣ್ಣು ಮಕ್ಕಳಿಗಂತೂ ತುಂಬಾ ಕಷ್ಟವಾಗುತ್ತಿತ್ತು. ಆದರೆ ಅವರಿಗೆ ಈ ಸಮಸ್ಯೆಯಿಂದ ಹೊರಬರಲು ಏನು ಮಾಡಬೇಕು ಎಂದು ಗೊತ್ತಾಗುತ್ತಿರಲಿಲ್ಲ ಎನ್ನುತ್ತಾರೆ ಭವ್ಯರಾಣಿ.

ದಿಬ್ಬಡಹಟ್ಟಿ ಗ್ರಾಮದಲ್ಲಿ ಭವ್ಯರಾಣಿ 34 ಸ್ನಾನದ ಗೃಹ ಮತ್ತು 17 ಶೌಚಾಲಯಗಳನ್ನು ಕಟ್ಟಿಸಿದ್ದಾರೆ. ಪ್ರತಿ ಸ್ನಾನದ ಗೃಹಕ್ಕೆ ತಲಾ 26,000 ಹಾಗೂ ಶೌಚಾಲಯಕ್ಕೆ 14,000 ರೂಪಾಯಿ ವ್ಯಯಿಸಿದ್ದಾರೆ. ಒಟ್ಟು ಇವರಿಗೆ 11,22,000 ರೂಪಾಯಿ ಖರ್ಚಾಗಿವೆ. ಸ್ವಚ್ಛ ಭಾರತ ನಿಧಿಯಿಂದ 2,22,000 ರೂಪಾಯಿ ಸಿಕ್ಕಿದೆ ಎನ್ನುತ್ತಾರೆ.



ಭವ್ಯರಾಣಿ

ಗ್ರಾಮಸ್ಥರಿಗೂ ಭವ್ಯರಾಣಿಯವರ ಈ ಕೆಲಸ ಸಂತಸ ತಂದಿದೆ. ಭವ್ಯರಾಣಿಯವರ ಈ ಸಮಾಜ ಸೇವೆ ಕೇವಲ ತುಮಕೂರಿನ ಒಂದು ಗ್ರಾಮಕ್ಕೆ ನಿಂತಿಲ್ಲ. ಅವರ ಮುಂದಿನ ಗುರಿ ಕರ್ನಾಟಕವನ್ನು ಬಯಲು ಶೌಚ ಮುಕ್ತ ರಾಜ್ಯವನ್ನಾಗಿ ಮಾಡಬೇಕೆಂಬುದು. ಈ ನಿಟ್ಟಿನಲ್ಲಿ ಅವರು ಕಾರ್ಯಪ್ರವೃತ್ತರಾಗಿದ್ದಾರೆ.

SCROLL FOR NEXT