ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಉಷ್ಣಾಂಶ ಹೆಚ್ಚುತ್ತಲೇ ಇದ್ದು, ಬಿಸಿಲ ತಾಪಕ್ಕೆ ತತ್ತರಿಸುತ್ತಿರುವ ಜನತೆಗೆ ಕೊಂಚ ನಿರಾಳ ಎದುರಾಗಲಿದ್ದು, ವಾರದೊಳಗಾಗಿ ರಾಜ್ಯದಾದ್ಯಂತ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಸೋಮವಾರ ಮಾಹಿತಿ ನೀಡಿದೆ.
ಹಿಂದೂ ಮಹಾಸಾಗರ ಮತ್ತು ಬಂಗಾಳದ ನೈಋತ್ಯ ಕೊಲ್ಲಿಯಲ್ಲಿ ಸೈಕ್ಲೋನ್ ಎದುರಾಗುತ್ತಿದ್ದು, ಇದರ ಪರಿಣಾಮ ರಾಜ್ಯದಲ್ಲೂ ಮಳೆಯಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿರುವ ನಗರದ ಭಾರತೀಯ ಹವಾಮಾನ ಕೇಂದ್ರದ ನಿರ್ದೇಶಕ ಎಂ. ಸುಂದರ್ ಮೆತ್ರಿ ಅವರು, ಕರ್ನಾಟಕ ದಕ್ಷಿಣ ಭಾಗ ಹಾಗೂ ಕರಾವಳಿ ತೀರ ಪ್ರದೇಶಗಳಲ್ಲಿ ಮಾ,14 ರಂದು ಮಳೆಯಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
ಬೆಂಗಳೂರು ನಗರದಲ್ಲಿ ಮಳೆಯಾಗುವ ಸಾಧ್ಯತೆಗಳಿಲ್ಲದೇ ಹೋದರು, ಮೋಡ ಕವಿದ ವಾತಾವರಣ ಹಾಗೂ ಗುಡುಗು, ಮಿಂಚು ಕಾಣಿಸಿಕೊಳ್ಳಲಿದೆ. ಮಾ.15 ರ ಬಳಿಕ ಮಳೆಯಾಗುವ ಸಾಧ್ಯತೆಗಳಿವೆ. ಇನ್ನು ಚಾಮರಾಜನಗರ, ಹಾಸನ, ಶಿವಮೊಗ್ಗ, ಮೈಸೂರು ಹಾಗೂ ಉಡುಪಿ ಸೇರಿದಂತೆ ಇನ್ನತರೆ ನಗರಗಳಲ್ಲಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.
ಸಮುದ್ರದ ಹತ್ತಿರ ಸುಳಿಯದಂತೆ ಮೀನುಗಾರರಿಗೆ ಎಚ್ಚರಿಕೆ
ಒತ್ತಡಗಳು ಹೆಚ್ಚಾಗುತ್ತಿರುವುದರಿಂದ ಸಮುದ್ರದ ಅಲೆಗಳು ದೊಡ್ಡ ಮಟ್ಟದಲ್ಲಿ ಅಪ್ಪಳಿಸಲಿದ್ದು ಈ ಹಿನ್ನೆಲೆಯಲ್ಲಿ ಮೂರು ದಿನಗಳವರೆಗೂ ಸಮುದ್ರದತ್ತ ಸುಳಿಯದಂತೆ ದಕ್ಷಿಣ ಕನ್ನಡ ಜಿಲ್ಲೆಯ ಮೀನುಗಾರರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಕರಾವಳಿ ತೀರ ಪ್ರದೇಶಗಳಲ್ಲಿ ದೋಣಿಗಳಲ್ಲಿರುವ ಜನರಿಗೂ ಹಿಂದಕ್ಕೆ ಬರುವಂತೆ ಸೂಚಿಸಲಾಗಿದೆ. ಅಪಾಯ ಎದುರಾದಾಗ ರಕ್ಷಣೆ ಮಾಡಿಕೊಳ್ಳುವ ಸಲುವಾಗಿ, ಗುಂಪು ಸೇರಿ ದೋಣಿಗಳಿಂದ ಹಿಂದಕ್ಕೆ ಬರುವಂತೆ ಸೂಚಿಸಲಾಗಿದೆ ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics