ಬೆಂಗಳೂರು: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮಾರ್ಚ್ 22ರಂದು ಮುಷ್ಕರಕ್ಕೆ ಕರೆ ನೀಡಿರುವ ಮೆಟ್ರೊ ಸಿಬ್ಬಂದಿಯ ಪ್ರತಿನಿಧಿಗಳ ಜತೆ ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್) ಆಡಳಿತ ಮಂಡಳಿ ಬುಧವಾರ ಬೈಯಪ್ಪನಹಳ್ಳಿ ಡಿಪೋದಲ್ಲಿ ನಡೆಸಿದ ಸಂಧಾನ ಸಭೆ ವಿಫಲವಾಗಿದೆ.
ಆಡಳಿತ ಮಂಡಳಿ ನೌಕರರ ಕೆಲವು ಬೇಡಿಕೆಗಳನ್ನು ಮೂರು ತಿಂಗಳಲ್ಲಿ ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ ಮಾರ್ಚ್ 21ರೊಳಗೆ ಪ್ರಮುಖ ಬೇಡಿಕೆಗಳಾದ ವೇತನ ಪರಿಷ್ಕರಣೆ, ಗುತ್ತಿಗೆ ಕಾರ್ಮಿಕ ಪದ್ಧತಿ ರದ್ದು, ತಾರತಮ್ಯ ನಿವಾರಣೆ ಮಾಡದಿದ್ದರೆ 22ರಂದು ಮುಷ್ಕರ ನಡೆಸಲು ಮೆಟ್ರೊ ಸಿಬ್ಬಂದಿ ನಿರ್ಧರಿಸಿದ್ದಾರೆ.
ಬಿಎಂಆರ್ ಸಿಎಲ್ ಕಾರ್ಯಾಚರಣೆ ಹಾಗೂ ನಿರ್ವಹಣೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಶಂಕರ್ ನೇತೃತ್ವದಲ್ಲಿ ಸಭೆ ನಡೆಯಿತು. ಮೆಟ್ರೊ ರೈಲು ಚಾಲಕರು, ನಿಲ್ದಾಣ ನಿಯಂತ್ರಕರು, ಸೆಕ್ಷನ್ ಎಂಜಿನಿಯರ್‌ಗಳು, ಸಿಗ್ನಲಿಂಗ್, ಟೆಲಿಕಾಂ, ಸ್ವಯಂಚಾಲಿತ ದರ ವಸೂಲಿ (ಎಎಫ್‌ಸಿ), ಹಳಿಯ ಶಾಶ್ವತ ನಿರ್ವಹಣೆ, ಟ್ರ್ಯಾಕ್ಷನ್, ಸಿವಿಲ್ ಕಾಮಗಾರಿ ವಿಭಾಗಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಮಾರ್ಚ್ 16ರಂದು ಮುಖ್ಯ ಕಾರ್ಮಿಕ ಆಯುಕ್ತರ ಕಚೇರಿಯಲ್ಲಿ ಎರಡನೇ ಸುತ್ತಿನ ಮಾತುಕತೆಗೆ ಕರೆಯಲಾಗಿದೆ. ಇಲ್ಲೂ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ, 22ರಂದು ಮುಷ್ಕರ ನಡೆಸುತ್ತೇವೆ ಎಂದು ಬಿಎಂಆರ್‌ಸಿಎಲ್ ನೌಕರರ ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣಮೂರ್ತಿ ತಿಳಿಸಿದ್ದಾರೆ.