ಬೆಂಗಳೂರು: ಬೆಂಗಳೂರಿನ ಚಾಮರಾಜಪೇಟೆ 5ನೇ ಮುಖ್ಯರಸ್ತೆಯಲ್ಲಿ ನಡೆದಿದ್ದ ವಿಜಯಾ ವಸಂತ್ ಹತ್ಯೆ ಪ್ರಕರಣವನ್ನು ಚಾಮರಾಜಪೇಟೆ ಪೋಲೀಸರು ಬೇಧಿಸಿದ್ದಾರೆ. ವಿಜಯ ಅವರ ಸಾಕು ಮಗಳು ಸೋನು ಪೂಜಾರಿ (29), ಮತ್ತು ಆಕೆಯ ಸ್ನೇಹಿತ ಕುಮಾರ್ (21) ಸೇರಿ ಈ ಕೊಲೆ ಮಾಡಿದ್ದಾರೆಂದು ಪೋಲೀಸರು ತಿಳಿಸಿದರು.
ಚಾಮರಾಜಪೇಟೆಯಲ್ಲಿ ಒಂಟಿಯಾಗಿ ವಾಸವಿದ್ದ ವಿಜಯಾ ವಸಂತ್ ಅವರನ್ನು ಮಂಗಳವಾರ ಬೆಳಿಗ್ಗೆ 11.30ರ ಸುಮಾರಿಗೆ ಹತ್ಯೆ ಮಾಡಲಾಗಿತ್ತು. ಆರೋಪಿಗಳು ವಿಜಯಾ ಅವರ ತಲೆಗೆ ಸುತ್ತಿಗೆ ಹಾಗೂ ಮರದ ತುಂಡನ್ನು ಬಳಸಿ ಹೊಡೆದು ಕೊಲೆಗೈದಿದ್ದರು. ಆ ಬಳಿಕ ಆಕೆಯ ಮೈಮ್ಮೇಲಿದ್ದ ಒಡವೆಗಳನ್ನು ತೆಗೆದುಕೊಂಡು ಪರಾರಿಯಾಗಿದ್ದರು.
ಆರೋಪಿಗಳ ಕೃತ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದನ್ನು ಅನುಸರಿಸಿದ ಪೋಲೀಸರು ಆರೋಪಿಗಳದ ಸೋನು ಹಾಗೂ ಕುಮಾರ್ ಅವರನ್ನು ಬಂಧಿಸಿದ್ದಾರೆ.
"ಹೆತ್ತ ತಾಯಿ ನನ್ನನ್ನು ವಿಜಯಾ ಅವರ ಮಡಿಲಿಗೆ ಹಾಕಿ ಹೊರಟು ಹೋದರು. ನನ್ನನ್ನು ಸಾಕಿ ದೊಡ್ಡವಳನ್ನಾಗಿ ಮಾಡಿದ ವಿಜಯಾ, ನಾನು ಪ್ರಾಪ್ತ ವಯಸ್ಕಳಾಗುತ್ತಿದ್ದಂತೆ ವೇಶ್ಯಾವಾಟಿಕೆಗೆ ಸೇರಿಸಿದ್ದರು. ನನ್ನ ಬಾಳು ನರಕವಾಗುವಂತೆ ಮಾಡಿದರು. ಇದೇ ಕಾರಣಕ್ಕೆ ಅವರ ಮೇಲೆ ಪ್ರತೀಕಾರ ತೀರಿಸಿಕೊಂಡೆ" ಆರೋಪಿಯಾದ ಸೋನು ಪೋಲೀಸರಿಗೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾಳೆ.
ವಿಜಯಾ ಕಳೆದ ಇಪ್ಪತ್ತೈದು ವರ್ಷಗಳಿಂಡ ಚಾಮರಾಜಪೇಟೆಯಲ್ಲಿ ನೆಲೆಸಿದ್ದರು. ಆಕೆ ಬ್ಯೂಟಿ ಪಾರ್ಲರ್ ಇರಿಸಿಕೊಂಡಿದ್ದರು. ಆಕೆಗೂ ಸೋನು ತಾಯಿಗೂ ಬಹಳ ಹಳೆಯ ಪರಿಚಯವಿತ್ತು. ಸೋನುವಿಗೆ ನಾಲ್ಕು ವರ್ಷವಾಗಿದ್ದಾಗ ಆಕೆಯನ್ನು ವಿಜಯಾ ಬಳಿ ಒಪ್ಪಿಸಿ ಆಕೆಯ ಹೆತ್ತ ತಾಯಿ ಕಣ್ಮರೆಯಾದರು. ಸೋನುವನ್ನು ಸಾಕಿ ದೊಡ್ಡವಳು ಮಾಡಿದ ವಿಜಯಾ ದುಡ್ಡಿನಾಸೆಗೆ ಬಿದ್ದು ಅವಳನ್ನು ವೇಶ್ಯಾವಾಟಿಕೆಗೆ ಸೇರಿಸಿದರು. ಮುಂಬೈನ ಕಾಮಾಟಿಪುರ ಸೇರಿದ ಸೋನು ಸುಮಾರು ಎಂಟು ವರ್ಷ ಅಲ್ಲಿಯೇ ಜೀವನ ಕಳೆದಿದ್ದಾಳೆ.
ಅಲ್ಲಿ ಪರಿಚಯವಾದ ಪಂಜಾಬಿ ಯುವಕನನ್ನು ಪ್ರೀತಿಸಿ ವಿವಾಹವಾದ ಸೋನು ಒಂದು ವರ್ಷ ಕಾಲ ಚಂಡೀಘರದಲ್ಲಿ ವಾಸವಾಗಿದ್ದಳು. ಬಳಿಕ ಕೆಲಸ ಅರಸಿ ಮತ್ತೆ ಬೆಂಗಳೂರಿಗೆ ಬಂದ ಆಕೆ ಮತ್ತು ಆಕೆಯ ಪತಿ ಇಲ್ಲಿ ನೆಲೆಲ್ಸಿದ್ದರು. ಆದರೆ 2016ರಲ್ಲಿ ಆಕೆಯ ಪತಿ ಕೆಲಸಕ್ಕೆಂದು ಹೋದವನು ಮತ್ತೆ ಮರಳಲಿಲ್ಲ. ಸೋನು ಬದುಕು ಮತ್ತೆ ಅತಂತ್ರವಾಗಿತ್ತು. ಸಾಕುತಾಯಿಯ ಬಳಿ ಸಹಾಯಕ್ಕಾಗಿ ಬೇಡಿದಾಗ ಬೈಯ್ದು ಕಳಿಸಿದ್ದ ವಿಜಯಾ ನಡೆ ಸೋನುವಿಗೆ ಇನ್ನಷ್ಟು ಆಕ್ರೋಶ ತರಿಸಿತ್ತು. ಅದಾದ ಬಳಿಕ ಪಿಜಿ ಒಂದರಲ್ಲಿದ್ದುಕೊಂಡು ಕೆಂಪೇಗೌಡ ನಗರದ ಒಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಳು.
ಪಿಜಿಯಲ್ಲಿ ನಿರ್ವಾಹಕಿಯಾಗಿದ್ದ ಮಹಿಳೆಯೊಬ್ಬರ ಮಹ ಟಿ.ನರಸಿಪುರದ ಕುಮಾರ್ ನ ಪರಿಚಯ ಮಾಡಿಕೊಂಡ ಸೋನು ತನ್ನ ವ್ಯಥೆಯ ಕಥೆಯನ್ನು ಅವನಿಗೆ ಹೇಳಿ ತಾನು ವಿಜಯಾ ಅವರನ್ನು ಕೊಲ್ಲಬೇಕೆಂದೂ ಹೇಳಿದ್ದಳು. ಹಣ ಸಿಗುವುದೆನ್ನುವ ಹಂಬಲಕ್ಕೆ ಅವನೂ ಒಪ್ಪಿಕೊಂಡಿದ್ದ. ಅದರಂತೆ ಮಂಗಳವಾರ ವಿಜಯಾ ಅವರ ಮನೆಗೆ ತೆರಳಿದ. ಸೋನು ಅವರಿಗೆ ಮದ್ಯ ಕುಡಿಸಿ ನಿಯಂತ್ರಣ ಕಳೆದುಕೊಳ್ಳುವಂತೆ ಮಾಡಿದ್ದಳು. ಬಳಿಕ ಸ್ನೇಹಿತ ಕುಮಾರ್ ನನ್ನು ಕರೆಸಿಕೊಂಡು ಇಬ್ಬರೂ ಸೇರಿ ಸುತ್ತಿಗೆ, ಮರದ ತುಂಡಿನಿಂದ ಹೊಡೆದು ಕೊಂದು ಹಾಕಿದ್ದಾರೆ ಎಂದು ಪೋಲೀಸರು ತಿಳಿಸಿದರು.
ಅಂದೇ ಸಂಜೆ ವಿಜಯಾ ಅವರ ಮನೆಗೆ ಬಂದಿದ್ದ ಅವರ ಸ್ನೇಹಿತೆಕೊರಟಗೆರೆ ಮೂಲದ ಲಕ್ಷ್ಮಿ ಅಡಿಗೆ ಮನೆಯಲ್ಲಿ ಬಿದ್ದಿದ್ದ ವಿಜಯಾ ಅವರ ದೇಹವನ್ನು ಕಂಡು ಮನೆಯ ಮಾಲೀಕರಿಗೆ ಕರೆ ಮಾಡಿ ವಿಚಾರ ತಿಳಿಸಿದ್ಡಾರೆ. ಅವರು ಪೋಲೀಸರಿಗೆ ಮಾಹಿತಿ ನೀಡಿದ್ದು ಆರೋಪಿಗ ಜಾಡು ಹಿಡಿದ ಪೋಲೀಸರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.