ಬೆಂಗಳೂರು: ಫೆಬ್ರವರಿ 17 ರಂದು ಫರ್ಜಿ ಕೆಫೆಯಲ್ಲಿ ವಿದ್ವತ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಮೊಹಮದ್ ನಲಪಾಡ್ ಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.
ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠದಿಂದ ಮಹತ್ವದ ಆದೇಶ ತೀರ್ಪು ನೀಡಿದೆ. ಕೆಫೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ನೋಡಿದ ಮೇಲೆ ಮೊಹಮದ್ ನಲಪಾಡ್ ಗೆ ಜಾಮೀನು ನೀಡಲು ನಿರಾಕರಿಸಿದೆ. ಮೊಹಮದ್ ನಲಪಾಡ್ ಜಾಮೀನು ಅರ್ಜಿ ವಿಚಾರಣೆ ತೀರ್ಪು ಕೇಳಲು ನ್ಯಾಯಾಲಯದಲ್ಲಿ ಜನ ಕಿಕ್ಕಿರಿದು ಸೇರಿದ್ದರು.
ವಿದ್ವತ್ ಮೇಲೆ ದಾಳಿ ನಡೆಸಿರುವುದು ವೀಡಿಯೋ ದೃಶ್ಯಗಳಿಂದ ಸಾಬೀತಾಗಿದೆ. ನಲಪಾಡ್ ಪ್ರಭಾವಿ ವ್ಯಕ್ತಿಯ ಮಗ. ಅವನು ಅದಾಗಲೇ ವಿದ್ವತ್ ನ ವೈದ್ಯಕೀಯ ದಾಖಲೆಗಳ ಪ್ರತಿ ಪಡೆದುಕೊಂಡಿರುವುದು ಅವನ ಪ್ರಭಾವೀ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ. ಹೀಗಾಗಿ ಪ್ರಕರಣದ ತನಿಖೆ ಪೂರ್ಣವಾಗುವವರೆಗೆ ಜಾಮೀನು ನೀಡುವುದಕ್ಕೆ ಸಾಧ್ಯವಿಲ್ಲ, ಹೀಗಾಗಿ ಜಾಮೀನು ನಿರಾಕರಿಸಿರುವುದಾಗಿ ತಿಳಿಸಿದ್ದಾರೆ.
ನಲಪಾಡ್ ಸಮಾಜದಲ್ಲಿ ಪ್ರಭಾವಿ ವ್ಯಕ್ತಿಯ ಮಗ, ಹಾಲಿ ಶಾಸಕರ ಪುತ್ರನಾಗಿದ್ದು, ಸಿಸಿಟಿವಿಯಲ್ಲಿ ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ಕಂಡು ಬಂದಿದೆ, ವಿದ್ವತ್ ಮೇಲೆ ಆತ ಮಸಲ್ ಪವರ್ ತೋರಿರುವುದು ಸಾಬೀತಾಗಿದೆ. ರೆಸ್ಟೊರೆಂಟ್ ನಲ್ಲಿ ಗಾಯಾಳುವನ್ನು ರಕ್ಷಿಸಲು ಯಾರು ಬರಲಿಲ್ಲ, ಇಡೀ ಕೃತ್ಯ ತುಂಬಾ ಭಯಂಕರ ಹಾಗೂ ಭಯಾನಕವಾಗಿತ್ತು, ಆತನ ಬಳಿ ಶಕ್ತಿ ಹಾಗೂ ಅಧಿಕಾರ ಬಲವಿದೆ, ಒಂದು ವೇಳೆ ನಾನು ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೇ ಅಧಿಕಾರ ದುರುಪಯೋಗ ಪಡಿಸಿಕೊಂಡು ಸಾಕ್ಷಿಗಳನ್ನು ನಾಶ ಮಾಡುವ ಸಾಧ್ಯತೆಯಿರುತ್ತದೆ ಎಂದು ಹೇಳಿದೆ.
ವಿಚಾರಣಾಧೀನ ನ್ಯಾಯಾಲಯ ಜಾಮೀನು ನಿರಾಕರಿಸಿದ ಮೇಲೆ ಮೊಹಮದ್ ಹೈಕೋರ್ಟ್ ಗೆ ತೆರಳಿದ್ದರು, ಈ ಎಲ್ಲಾ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಜಾಮೀನು ನಿರಾಕರಿಸಲಾಗಿದೆ,
ಇದೊಂದು ಘನಘೋರ ಹಲ್ಲೆ ಪ್ರಕರಣ. ಘಟನೆ ನಡೆದ ಸ್ಥಳದಲ್ಲಿ ನೂರಾರು ಮಂದಿ ಇದ್ದರೂ ಯಾರೂ ಸಹಾಯಕ್ಕೆ ಬಂದಿಲ್ಲ. ನಲಪಾಡ್ ಗ್ಯಾಂಗ್‌ನ ಪೈಶಾಚಿಕ ಶಕ್ತಿ ಪ್ರದರ್ಶನಕ್ಕೆ ಹೆದರಿ ಅಲ್ಲಿದ್ದ ಯಾರೊಬ್ಬರೂ ವಿದ್ವತ್‌ನ ಸಹಾಯಕ್ಕೆ ಬಂದಿಲ್ಲ. ಇದರಿಂದಲೇ ನಲಪಾಡ್‌ನ ಪ್ರಭಾವ ಎಷ್ಟು ಎಂಬುದು ತಿಳಿಯಲಿದೆ.
ಇನ್ನೂ ಹೈಕೋರ್ಟ್ ಜಾಮೀನು ನಿರಾಕರಿಸಿರುವ ಹಿನ್ನೆಲೆಯಲ್ಲಿ ಮೊಹಮದ್ ನಲಪಾಡ್ ಸುಪ್ರೀಂಕೋರ್ಟ್ ಮೆಟ್ಟಿಲೇರುವ ಸಾಧ್ಯತೆಯಿದೆ.