ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಕೆ.ಟಿ ನವೀನ್ ಕುಮಾರ್ ನನ್ನು ಹಲವು ತನಿಖಾ ಸಂಸ್ಥೆಗಳು ವಿಚಾರಣೆಗೊಳಪಡಿಸಿವೆ.
ಸಿಬಿಐ ಸೇರಿದಂತೆ ಮಹಾರಾಷ್ಟ್ರ ಎಸ್‌ಐಟಿ ಹಾಗೂ ತೆಲಂಗಾಣದ ‘ಆಕ್ಟೋಪಸ್’ (ಭಯೋತ್ಪಾದನಾ ನಿಗ್ರಹ ತಂಡ) ಅಧಿಕಾರಿಗಳು ಮೂರು ದಿನಗಳಿಂದ ನಗರದಲ್ಲಿ ಬೀಡುಬಿಟ್ಟಿದ್ದು ನವೀನ್ ಕುಮಾರ್ ಹೇಳಿಕೆ ಪಡೆಯುತ್ತಿದ್ದಾರೆ ಎಂದು ಪ್ರಕರಣದ ತನಿಖಾಧಿಕಾರಿಯಾಗಿರುವ ಪಶ್ಚಿಮ ವಿಭಾಗದ ಡಿಸಿಪಿ ಅನುಚೇತ್ ತಿಳಿಸಿದ್ದಾರೆ.
ಕಳೆದ ಮೂರು ದಿನಗಳಿಂದ ನಗರದಲ್ಲಿ ಬೀಡು ಬಿಟ್ಟಿರುವ ಅಧಿಕಾರಿಗಳು ಗೋವಿಂದ್ ಪನ್ಸಾರೆ ಹಾಗೂ ನರೇಂದ್ರ ದಾಬೋಲ್ಕರ್ ಅವರ ಹತ್ಯೆ ಪ್ರಕರಣಗಳ ಕುರಿತು ವಿಚಾರಣೆ ಮುಂದುವರಿಸಿದ್ದಾರೆ.
ನವೀನ್ ಪದೇ ಪದೇ ಹೇಳಿಕೆಗಳನ್ನು ಬದಲಿಸುತ್ತಿದ್ದಾನೆ. ಹೀಗಾಗಿ, ಆತನನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಅನುಮತಿ ನೀಡಬೇಕು ಎಂದು ಎಸ್‌ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಸೋಮವಾರ (ಮಾರ್ಚ್ 12) ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಮಂಪರು ಪರೀಕ್ಷೆ ಎದುರಿಸಲು ಆರೋಪಿ ಒಪ್ಪಿದ್ದರಿಂದ ಅದಕ್ಕೆ ಅನುಮತಿ ನೀಡಿತ್ತು.
ಆರೋಪಿಯನ್ನು ಯಾವ ದಿನಾಂಕದಂದು ಕರೆದುಕೊಂಡು ಬರಬೇಕು ಹಾಗೂ ಪರೀಕ್ಷೆಗೆ ಪೂರ್ಣಗೊಳ್ಳಲು ಎಷ್ಟು ದಿನ ಬೇಕಾಗಬಹುದು ಎಂದು ಪತ್ರದಲ್ಲಿ ಕೇಳಿದ್ದೇವೆ. ಅಲ್ಲಿನ ಅಧಿಕಾರಿಗಳಿಂದ ಪ್ರತಿಕ್ರಿಯೆ ಬಂದ ಕೂಡಲೇ, ನ್ಯಾಯಾಲಯದ ಗಮನಕ್ಕೆ ತಂದು ಆರೋಪಿಯನ್ನು ಮಂಪರು ಪರೀಕ್ಷೆಗೆ ಕರೆದೊಯ್ಯುತ್ತೇವೆ ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ.